ಮೈಸೂರು ನಗರದ ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರ ಆವರಣದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿರುವ ಜನಸ್ತೋಮ
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಮೈಸೂರು ಸಜ್ಜಾಗಿದ್ದು, ಹಬ್ಬದ ಮುನ್ನಾದಿನವಾದ ಗುರುವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬೆಳಗ್ಗೆಯಿಂದಲೇ ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಮಾರುಕಟ್ಟೆ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನದಟ್ಟಣೆ ಕಂಡುಬಂದಿದ್ದು, ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು.
ವರಮಹಾಲಕ್ಷ್ಮೀ ವ್ರತಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿ ದ್ದರು. ಕುಟುಂಬ ಸಮೇತ ಬಂದಿದ್ದ ಗ್ರಾಹಕರು ಪೂಜೆಗೆ ಬೇಕಾದ ಹೂವು, ಹಣ್ಣು, ಬಾಳೆಕಂದು, ಮಾವಿನ ಎಲೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಹಬ್ಬದ ಹಿಂದಿನ ದಿನವೇ ಮಾರುಕಟ್ಟೆಯಲ್ಲಿ ಕಂಡುಬಂದ ಜನಜಂಗುಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ನಗರದ ಹೃದಯಭಾಗದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ಗುರುವಾರ ಜನಸಾಗರವೇ ನೆರೆದಿತ್ತು. ಹೂವು ಹಾಗೂ ಹಣ್ಣುಗಳ ಮಳಿಗೆಗಳ ಮುಂದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ವ್ಯಾಪಾರಿಗಳು ಬಿಡುವಿಲ್ಲದೆ ವಹಿವಾಟಿನಲ್ಲಿ ತೊಡಗಿದ್ದರು. ಒಂದು ಕಡೆ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡುತ್ತಿದ್ದರೆ, ಮತ್ತೊಂದೆಡೆ ವ್ಯಾಪಾರಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ಅಳೆದು, ಕಟ್ಟಿ ನೀಡುವಲ್ಲಿ ನಿರತರಾಗಿದ್ದರು.
ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಜನರ ಆಗಮನ ಆರಂಭವಾಗಿದ್ದು, ಸಮಯ ಕಳೆದಂತೆ ಜನದಟ್ಟಣೆ ಹೆಚ್ಚಾಯಿತು. ಹಬ್ಬದ ದಿನಕ್ಕೆ ಬೇಕಾಗುವ ವಸ್ತುಗಳನ್ನು ಕೊನೆಯ ಕ್ಷಣದಲ್ಲಿ ಖರೀದಿಸುವ ಬದಲು ಮುಂಚಿತವಾಗಿಯೇ ಖರೀದಿಸಲು ಹಲವರು ಮುಂದಾಗಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಭಾರಿ ಬೇಡಿಕೆ ಬಂದಿರುವುದರಿಂದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಪ್ರಮುಖ ಹೂವುಗಳ ಬೆಲೆ ಹಲವು ಪಟ್ಟು ಹೆಚ್ಚಾಗಿದ್ದು, ಗ್ರಾಹಕರು ಬೆಲೆ ವಿಚಾರಿಸಿಕೊಂಡು ನಂತರ ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು.
ಗುರುವಾರ ಕನಕಾಂಬರ ಕೆ.ಜಿ.ಗೆ 1,600 ರೂ., ಮಲ್ಲಿಗೆ 1,200 ರೂ.ಮ ಕಾಕಡ 1,200 ರೂ., ಸೇವಂತಿಗೆ 400 ರೂ., ಗುಲಾಬಿ 400 ರೂ., ಸುಗಂಧರಾಜ 400 ರೂ. ಹಾಗೂ ಚೆಂಡು ಹೂವು 60 ರೂ.ರಂತೆ ಮಾರಾಟವಾಯಿತು. ಸೇವಂತಿಗೆ ಮಾರಿಗೆ 100ರಿಂದ 120 ರೂ.ವರೆಗೆ ಬೆಲೆ ಇತ್ತು. ಪೂಜಾ ಅಲಂಕಾರಕ್ಕೆ ಅಗತ್ಯವಾಗಿರುವ ಬಾಳೆಕಂದು ಜೋಡಿಗೆ 30 ರೂ. ಹಾಗೂ ಮಾವಿನ ಎಲೆ ಒಂದು ಕಟ್ಟಿಗೆ 20 ರೂ.ನಂತೆ ಮಾರಾಟವಾಯಿತು.
ಹಬ್ಬದ ಸಂದರ್ಭದಲ್ಲಿ ಹೂವು ಹಾಗೂ ಹಣ್ಣುಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಮಳೆಯ ಕೊರತೆಯೂ ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಮಳೆಯ ಕೊರತೆಯಿಂದಾಗಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆ ಪ್ರದೇಶದಲ್ಲಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆಯಾಗಿದೆ. ಇದೇ ವೇಳೆ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ.
ವರಮಹಾಲಕ್ಷ್ಮೀ ಪೂಜೆಯಲ್ಲಿ ಹಣ್ಣುಗಳಿಗೂ ವಿಶೇಷ ಸ್ಥಾನವಿರುವುದರಿಂದ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಖರೀದಿ ಜೋರಾಗಿತ್ತು. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ವಿವಿಧ ಹಣ್ಣುಗಳನ್ನು ಖರೀದಿಸುತ್ತಿದ್ದರು. ಏಲಕ್ಕಿ ಬಾಳೆ ಕೆ.ಜಿ.ಗೆ 100 ರಿಂದ 130 ರೂ., ಪಚ್ಚಬಾಳೆ 40 ರಿಂದ 50 ರೂ., ಸೀಬೆ 80 ರಿಂದ 100 ರೂ., ಸೇಬು 200 ರಿಂದ 250 ರೂ., ದ್ರಾಕ್ಷಿ 150 ರಿಂದ 200 ರೂ., ಬಟರ್‌ಫ್ರೂಟ್ 120 ರಿಂದ 150 ರೂ., ದಾಳಿಂಬೆ 100 ರಿಂದ 200 ರೂ., ಕಿತ್ತಳೆ 100 ರಿಂದ 150 ರೂ., ಸಪೋಟ 80ರಿಂದ 100 ರೂ., ಪಪ್ಪಾಯ 40 ರಿಂದ 50 ರೂ. ಹಾಗೂ ಮೂಸಂಬಿ 60 ರಿಂದ 80 ರೂ.ರಂತೆ ಮಾರಾಟವಾಯಿತು. ಕೆಲವು ಹಣ್ಣುಗಳ ಬೆಲೆಯಲ್ಲಿ ಗುಣಮಟ್ಟ ಮತ್ತು ಗಾತ್ರಕ್ಕೆ ಅನುಗುಣವಾಗಿ ವ್ಯತ್ಯಾಸ ಕಂಡುಬಂದಿದ್ದು, ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಹೆಚ್ಚಿನ ಬೆಲೆ ನಿಗದಿಯಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣು ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆಯಿತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಹಬ್ಬದ ದಿನದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಗಳು ಮುಂಚಿತವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಹೂವು ಮತ್ತು ಹಣ್ಣುಗಳನ್ನು ತರಿಸಿಕೊಂಡಿದ್ದರು. ಗ್ರಾಹಕರ ಬೇಡಿಕೆ ಹೆಚ್ಚಿರುವುದರಿಂದ ಬೆಳಗ್ಗೆಯಿಂದಲೇ ವ್ಯಾಪಾರ ಚುರುಕುಗೊಂಡಿತ್ತು. ಸಂಜೆ ವೇಳೆಯಲ್ಲಿಯೂ ಖರೀದಿ ಮುಂದುವರಿದಿತ್ತು. ದೇವರಾಜ ಮಾರುಕಟ್ಟೆಯ ಜತೆಗೆ ಧನ್ವಂತ್ರಿ ರಸ್ತೆ, ನಂಜುಮಳಿಗೆ ಸೇರಿದಂತೆ ನಗರದ ವಿವಿಧೆಡೆ ಹಬ್ಬದ ಖರೀದಿ ಜೋರಾಗಿತ್ತು. ಪೂಜಾ ಸಾಮಗ್ರಿ ಹಾಗೂ ಹಬ್ಬಕ್ಕೆ ಅಗತ್ಯವಿರುವ ಇತರ ವಸ್ತುಗಳ ಖರೀದಿಗಾಗಿ ಜನರು ಅಂಗಡಿಗಳಿಗೆ ಮುಗಿಬಿದ್ದಿದ್ದರು.
ಹಬ್ಬದ ಖರೀದಿಗಾಗಿ ನಗರದ ವಿವಿಧ ಭಾಗಗಳಿಂದ ಜನರು ದೇವರಾಜ ಮಾರುಕಟ್ಟೆ ಕಡೆಗೆ ಆಗಮಿಸಿದ್ದರಿಂದ ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳಲ್ಲೂ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಯ್ಯಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೆಲವೆಡೆ ವಾಹನಗಳು ನಿಧಾನಗತಿಯಲ್ಲಿ ಸಾಗಿದ ಪರಿಣಾಮ ಸಂಚಾರ ಸಮಸ್ಯೆ ಉಂಟಾಯಿತು.
ಮಾರುಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆಗೂ ಸಮಸ್ಯೆ ಎದುರಾಯಿತು. ಜನರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಖರೀದಿಗೆ ತೆರಳಿದ್ದರಿಂದ ಕೆಲವೆಡೆ ಸಂಚಾರಕ್ಕೆ ತೊಂದರೆಯಾಯಿತು.