- ಕೇಂದ್ರದಿಂದ ಆಗಮಿಸಲಿದೆ ತಂಡ
- ಈ ಬಾರಿ 12,500 ಅಂಕಗಳಿಗೆ ಸ್ಪರ್ಧೆ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2025-26ನೇ ಸಾಲಿಗೆ ಬಿಡುಗಡೆ ಮಾಡಿರುವ ಸ್ವಚ್ಛ ಸರ್ವೇಕ್ಷಣೆಯ ಟೂಲ್‌ಕಿಟ್‌ಗೆ ಪೂರಕವಾಗಿ ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛ ಸರ್ವೇಕ್ಷಣೆಗೆ ಸಕಲ ಸಿದ್ಧತೆ ಕೈಗೊಂಡಿದ್ದು, ಏಪ್ರಿಲ್ ಮೊದಲ ವಾರದಿಂದ ಸರ್ವೇಕ್ಷಣೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ಬಾರಿ ‘ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸರ್ವೇಕ್ಷಣೆ ನಡೆಯುತ್ತಿದೆ. ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಈ ಬಾರಿ ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದೆ ಇದ್ದರೂ ಸ್ವಚ್ಛ ಸರ್ವೇಕ್ಷಣ ತಂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನಡೆಸುವ ಮೌಲ್ಯ ಮಾಪನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆ ಮಹತ್ವ ಪಡೆದುಕೊಂಡಿದೆ.
ಪಾಲಿಕೆಯಿಂದ ಸರ್ವೇಕ್ಷಣೆಗೆ ಸಿದ್ಧತೆ: ಸ್ವಚ್ಛ ಸರ್ವೇಕ್ಷಣೆಗೆ ನಗರ ಪಾಲಿಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ಸ್ವಚ್ಛತಾ ರೋಡ್ ಶೋ, ಸ್ವಚ್ಛತಾ ಎಕ್ಸ್‌ಪೋ, ಸೈಕಲ್ ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಮುದಾಯ ಸಂಘಟಕರನ್ನು ನೇಮಕ ಮಾಡಿ ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಲಾಗುತ್ತಿದೆ. ಮಹಿಳಾ ಸಂಘಗಳಿಗೆ ಉದ್ಯಾನದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಸ್ವಚ್ಛತೆ ಕುರಿತು ಹಲವು ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಣೆ ಮಾಡಲಾಗಿದೆ. ಅಶುಚಿತ್ವದ ತಾಣಗಳನ್ನು ಗುರುತಿಸಿ ಸ್ವಚ್ಛಗೊಳಿಸಿ ಬಣ್ಣ ಬಳಿಯುವ ಮೂಲಕ ಸುಂದರ ತಾಣಗಳನ್ನಾಗಿ ರೂಪಿಸಲಾಗುತ್ತಿದೆ. ಈ ರೀತಿ ಹತ್ತು ಹಲವು ಚಟುವಟಿಕೆಗಳನ್ನು ಈ ಬಾರಿ ಕೈಗೊಳ್ಳಲಾಗಿದೆ.
ಸೂಯೇಜ್‌ಫಾರ್ಮ್‌ನಲ್ಲಿ ಸಂಗ್ರಹವಾಗಿದ್ದ ಹಳೆಯ ತ್ಯಾಜ್ಯ ವಿಲೇವಾರಿ ಅಗದೆ ಇರುವುದು ಹಾಗೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ನಗರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಹಿನ್ನಡೆ ಅನುಭವಿಸುತಿತ್ತು. ಈ ಬಾರಿ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಹಂಚ್ಯಾದಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ಸೂಯೇಜ್‌ಫಾರ್ಮ್‌ನಲ್ಲಿ ಹಳೆಯ ತ್ಯಾಜ್ಯ ವಿಲೇವಾರಿ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ ಶೇ.60 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.
12,500 ಅಂಕಗಳಿಗೆ ಸ್ಪರ್ಧೆ: ಕಳೆದ ಬಾರಿಯಂತೆ ಈ ಬಾರಿಯೂ 12,500 ಅಂಕಗಳಿಗೆ ಸ್ಪರ್ಧೆ ನಡೆಯಲಿದೆ. 1 ರಿಂದ 4 ಹಂತಗಳಿಗೆ ಒಟ್ಟು 10,500 ಅಂಕಗ ಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 2,000 ಅಂಕಗಳ ಪೈಕಿ ಒಡಿಎಫ್, ಒಡಿಎಫ್ +, ಒಡಿಎಫ್++, ವಾಟರ್+ಗೆ 1,000 ಅಂಕಗಳು, ತ್ಯಾಜ್ಯ ಮುಕ್ತ ನಗರಕ್ಕೆ 1,000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
1 ರಿಂದ 4 ರವರೆಗಿನ ಹಂತಗಳಲ್ಲಿ ಬರುವ 10,500 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ವಿಜಿಬಲ್ ಕ್ಲೀನ್ಲಿನೆಸ್ (ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊಳಿಸುವುದು ಹಾಗೂ ಇತ್ಯಾದಿ)ಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000, ಘನತ್ಯಾಜ್ಯ ನಿರ್ವಹಣೆಗೆ 1,500, ಆ್ಯಕ್ಸಸಸ್ ಟು ಸ್ಯಾನಿಟೇಷನ್ (ಶೌಚಗೃಹಗಳ ಉತ್ತಮ ನಿರ್ವಹಣೆ)ಗೆ 1,000, ಮಲಿನ ನೀರಿನ ನಿರ್ವಹಣೆಗೆ 1,000, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣಕ್ಕೆ 500, ಅಡ್ವೋಕೆಸಿ ಆಫ್ ಸ್ವಚ್ಛತಾ (ಸ್ವಚ್ಛತಾ ಆ್ಯಪ್ ಬಳಕೆ, ಸ್ವಚ್ಛತೆ ಕುರಿತು ಜನಜಾಗೃತಿ ಹಾಗೂ ಇತ್ಯಾದಿ)ಗೆ 1,500, ಇಕೋ ಸಿಸ್ಟಮ್ ಸ್ಟ್ರೆಂಥನಿಂಗ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಪ್ಯಾರಾಮೀಟರ್ಸ್ (ಅನೈರ್ಮಲ್ಯ ಸೃಷ್ಟಿಸುವವರಿಗೆ ದಂಡ ವಿಧಿಸುವುದು, ಸ್ವಚ್ಛ ವಾರ್ಡ್ ರ‌್ಯಾಂಕಿಂಗ್)ಗೆ 1,000, ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕೆ 500, ಸಿಟಿಜನ್ ಫೀಡ್‌ಬ್ಯಾಕ್‌ಗೆ 1000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು. 2024-25 ರಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದ ನಗರಗಳನ್ನು ರ‌್ಯಾಂಕಿಂಗ್ ವ್ಯಾಪ್ತಿಗೆ ಒಳಪಡಿಸಲಿಲ್ಲ.
ಸ್ವಚ್ಛ ಸರ್ವೇಕ್ಷಣೆಯ ತಂಡ ಏಪ್ರಿಲ್ ಮೊದಲ ವಾರದ ನಂತರ ನಗರಗಳಿಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವ ಸಾಧ್ಯತೆ ಇದೆ. ನಮ್ಮ ನಗರಕ್ಕೆ ಯಾವ ದಿನ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇನ್ನೂ ಬಂದಿಲ್ಲ. ಆದರೆ, ಸ್ವಚ್ಛ ಸರ್ವೇಕ್ಷಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಜನರು ಜಾಗೃತರಾಗಿ ನಗರದ ಸ್ವಚ್ಛತೆಗೆ ಸಹಕರಿಸಬೇಕು.
ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರ ಪಾಲಿಕೆ