ಮೈಸೂರು ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿ 
ಮೈಸೂರು

ಮೈಸೂರು: ‘ಕುಸಿದ ಬೇಡಿಕೆ’ ತರಕಾರಿ ಬೆಲೆ ಕುಸಿತ

ಸದೇಶ್ ಕಾರ್ಮಾಡ್
ಮೈಸೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಗೆ ಬೇಡಿಕೆ ಕುಸಿಯಲು ಪ್ರಾರಂಭವಾಗಿದೆ. ಪರಿಸ್ಥಿತಿ ಇದೇ ರೀತಿ ಕೆಲವು ದಿನಗಳ ಕಾಲ ಮುಂದುವರೆದರೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಬೆಳೆಯುವ ತರಕಾರಿ ಕೇವಲ ಜಿಲ್ಲೆಯ ಜನರು ಖರೀದಿಸುವುದು ಮಾತ್ರವಲ್ಲದೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಆದರೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್‌ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಸಿಲಿಂಡರ್ ದೊರೆಯದ ಹಿನ್ನೆಲೆಯಲ್ಲಿ ಸಾಕಷ್ಟು ಹೋಟೆಲ್‌ಗಳು ಹಾಗೂ ರಸ್ತೆ ಬದಿ ವ್ಯಾಪಾರಿಗಳು ತರಕಾರಿಯ ಬಳಕೆ ಪ್ರಮಾಣ ವನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿತ ಕಾಣಲು ಪ್ರಾರಂಭವಾಗಿದೆ. ಜಿಲ್ಲೆಯ ರೈತರು ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಆದರೆ, ಇದೀಗ ತರಕಾರಿಯ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಲೆ ಕುಸಿತ: ಜಿಲ್ಲೆಯಲ್ಲಿ ಮಾರ್ಚ್ 10ರ ನಂತರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಮಾ.10 ರವರೆಗೆ ಜಿಲ್ಲೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಉತ್ತಮ ಬೆಲೆ ಇತ್ತು. ಆದರೆ, ನಂತರ ಬೆಲೆ ಕುಸಿಯಲು ಪ್ರಾರಂಭವಾಯಿತು. ಗ್ಯಾಸ್ ಪೂರೈಕೆ ಸ್ಥಗಿತಗೊಂಡ ನಂತರ ವಿಶೇಷವಾಗಿ ಬೀನ್ಸ್ ಬೆಲೆ ಪಾತಾಳಕ್ಕೆ ಕುಸಿಯಲು ಪ್ರಾರಂಭವಾಗಿದ್ದು, ಉಳಿದ ತರಕಾರಿಗಳ ಬೆಲೆ ಅಲ್ಪ ಕುಸಿತ ಹಾಗೂ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ.
ಮಾ.10 ರಂದು ಬೀನ್ಸ್-ಸೋಲಾರ್ 65 ರೂ. (ಪ್ರಸ್ತುತ 35 ರೂ.), ಪೆನ್ಸಿಲ್ ಬೀನ್ಸ್ 50 ರೂ. (37 ರೂ.), ಮೆಣಸಿನಕಾಯಿ 40 ರೂ., (42 ರೂ.), ಸೌತೆಕಾಯಿ 13 ರೂ. (18 ರೂ.), ಎಂಸಿ 6 ರೂ. (4 ರೂ.), ಸುನಾಮಿ 3 ರೂ. (4 ರೂ.), ಯಳವನ 4 ರೂ. ( 3 ರೂ.), ಗುಂಡು ಬದನೆ 8 ರೂ. (5 ರೂ.), ಕುಂಬಳಕಾಯಿ 11 ರೂ. (8 ರೂ.), ಹೀರೆಕಾಯಿ 18 ರೂ. (18 ರೂ.), ಪಡವಲ 12 ರೂ. (15 ರೂ.), ತೊಂಡೆಕಾಯಿ 25 ರೂ.(20 ರೂ.), ಹಾಗಲ ವೈಟ್ 22 ರೂ. (20 ರೂ.), ಹಾಗಲ ಗ್ರೀನ್ 22 ರೂ. (20 ರೂ.), ಕಾಲಿಫ್ಲವರ್ 14 ರೂ. (11 ರೂ.), ಪೈರ್ 45 ರೂ. (30 ರೂ.), ದಪ್ಪಮೆಣಸು 26 ರೂ. (31 ರೂ.), ಸೋರೆಕಾಯಿ 4 ರೂ. (4 ರೂ.), ಬದನೆ ವೈಟ್ 6 ರೂ. (6 ರೂ.), ಕೋಸು ಚಪಾತಿ 6 ರೂ. (7 ರೂ.), ಕೋಸು ಸ್ಯಾಂ 5 ರೂ. (5 ರೂ.), ಸೀಮೆ ಬದನೆ 13 ರೂ.(15 ರೂ.), ಬಜ್ಜಿ-ನಾಟಿ 36 ರೂ. (25 ರೂ.), ಬಜ್ಜಿ-ಯಕೋನ 26 ರೂ. (16 ರೂ.), ಬೆಂಡೆಕಾಯಿ 25 ರೂ. (24 ರೂ.), ಟೊಮ್ಯಾಟೊ-ಹುಳಿ 10 ರೂ. (ಪ್ರಸ್ತುತ 18 ರೂ.) ಇತ್ತು.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ನಾವು ಬೆಳೆದ ಬೆಳೆಗಳು ಹೊಲದಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ. ನಾನು ಟೊಮ್ಯಾಟೊ, ಬೀನ್ಸ್, ಈರೆಕಾಯಿಯನ್ನು ಬೆಳೆಯುತ್ತಿದ್ದೇನೆ. ಆದರೆ, ತರಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ. ಪ್ರಸ್ತುತ ನಿರ್ಮಣವಾಗಿರುವ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬರಡನಪುರ ಮಹೇಶ್, ರೈತ
ಹೋಟೆಲ್‌ಗಳಿಗೆ ಅಲ್ಪ ಪ್ರಮಾಣದಲ್ಲಾದರೂ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆದರೆ, ಸರ್ಕಾರದಿಂದ ನಮಗೆ ಸ್ಪಂದನೆ ದೊರೆತ್ತಿಲ್ಲ. ಗ್ಯಾಸ್ ಸಿಲಿಂಡರ್ ಇಲ್ಲದ ಕಾರಣ ಕೆಲವು ಹೋಟೆಲ್‌ಗಳನ್ನು ಈಗಾಗಲೇ ಮುಚ್ಚಲಾಗಿದೆ. ಉಳಿದವರು ಇಂಡಕ್ಷನ್ ಸ್ಟೌವ್, ಸೌದೆ ಒಲೆಯ ಮೂಲಕ ಹೋಟೆಲ್‌ಅನ್ನು ಮುನ್ನಡೆಸುತ್ತಿದ್ದಾರೆ. ಗ್ಯಾಸ್ ಇಲ್ಲವಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಎಲ್ಲ ರೀತಿಯ ತಿಂಡಿ, ತಿನಿಸುಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು, ಇಲ್ಲವಾದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ನಾರಾಯಣ ಗೌಡ, ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ