ಇಲವಾಲ ಹೋಬಳಿಯಲ್ಲಿ ಎಂಡಿಎ ಬಡಾವಣೆ ನಿರ್ಮಾಣಕ್ಕೆ ಶನಿವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಅರ್. ರಕ್ಷಿತ್ ಡ್ರೋನ್ ಸರ್ವೇ ನಡೆಸಿದರು.
ಮೈಸೂರು: ನಿವೇಶನಕೋಸ್ಕರ ಹಲವು ವರ್ಷಗಳಿಂದ ಕಾಯುತ್ತಿದ್ದವರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಶುಭ ಸುದ್ದಿ ನೀಡಿದ್ದು, ನಗರದ ಹೊರವಲಯದಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ನಿವೇಶನಗನ್ನು ಒಳಗೊಂಡ ಬೃಹತ್ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಸಂಬಂಧ ಶನಿವಾರ ಡ್ರೋನ್ ಸರ್ವೇ ನಡೆಯಿತು.
ತಾಲೂಕಿನ ಇಲವಾಲ ಹೋಬಳಿಯ ದೊಡ್ಡಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ, ನಾಗವಾಲ ಗ್ರಾಮಗಳಲ್ಲಿ 50:50ರ ಅನುಪಾತದಡಿ 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲಾಗುತ್ತಿದ್ದು, ಶನಿವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ.ಅರ್. ರಕ್ಷಿತ್ ಡ್ರೋನ್ ಸರ್ವೇಗೆ ಚಾಲನೆ ನೀಡಿದರು. ಡ್ರೋನ್ ಸರ್ವೇ ಕಾರ್ಯದ ಉಸ್ತುವಾರಿ ರಾಜಗುರು, ಎಂಡಿಎ ಅಧಿಕಾರಿಗಳು, ಜಮೀನು ಮಾಲೀಕರು ಇದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚಿಸಲು ಮುಂದಾಗಿದ್ದು, ಇದರೊಂದಿಗೆ ನಗರದ ಬೆಳವಣಿಗೆಯ ವೇಗವೂ ಹೆಚ್ಚಾಗಲಿದೆ. ಈ ಬೆಳವಣಿಗೆಗೆ ಪೂರಕವಾಗಿ ನಗರದಲ್ಲಿ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಮುಂದಾಗಿದೆ.
ಯೋಜನೆಯಡಿ ರೈತರಿಗೆ ಯಾವುದೇ ಖರ್ಚು ಇಲ್ಲದೆ ಬಡಾವಣೆ ರಚಿಸಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಬಿಟ್ಟುಕೊಡಲು ಎಂಡಿಎ ನಿರ್ಧರಿಸಿದೆ. ರೈತರಿಂದಲೂ ಇದಕ್ಕೆ ಪೂರಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಇದೀಗ ಡ್ರೋನ್ ಸರ್ವೇ ಪ್ರಾರಂಭಗೊಂಡಿದೆ.
ಹಿಂದಿನ ಮುಡಾ ಅಸ್ತಿತ್ವದಲ್ಲಿದ್ದಾಗ ರವೀಂದ್ರನಾಥ್ ಟಾಗೂರ್ ಬಡಾವಣೆ ನಿರ್ಮಾಣ ಮಾಡಿದ ಬಳಿಕ ಎರಡು ದಶಕದಿಂದ ಹೊಸ ಬಡಾವಣೆಯನ್ನೇ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಖಾಸಗಿ ವ್ಯಕ್ತಿಗಳ ಬಡಾವಣೆ ಮಸಲತ್ತು, ಸಕಾಲಕ್ಕೆ ಪರಿಹಾರ ಹಣ ಬಿಡುಗಡೆ ಮಾಡದಿದ್ದಕ್ಕೆ ಭೂಮಿ ಕೊಡಲು ರೈತರ ಹಿಂದೇಟು ಹಾಕಿದ್ದು ಸೇರಿ ನಾನಾ ಕಾರಣಕ್ಕಾಗಿ ಹೊಸ ಬಡಾವಣೆ ಮಾಡಿರಲಿಲ್ಲ. ಈಗ ಮುಡಾ ವಿಸರ್ಜಿಸಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮೇಲೆ ತನ್ನದೇ ಆದ ಸ್ವಾಯತ್ತತೆಯ ತೀರ್ಮಾನಗಳನ್ನು ಕೈಗೊಳ್ಳುವ ಕೆಲಸ ಮಾಡಿದೆ.
50:50 ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಿದ ನಂತರ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಸ್ವತಃ ರೈತರೊಂದಿಗೆ ನೇರ ಮಾತುಕತೆ ನಡೆಸಿ ಜಮೀನು ಒಪ್ಪಂದಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾದರು. ಹೊಸ ಬಡಾವಣೆ ನಿರ್ಮಾಣ ಸಂಬಂಧ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ನಾಗವಾಲ, ಬೊಮ್ಮೇನಹಳ್ಳಿ, ಕಮರಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ಜಮೀನುಗಳ ಭೂ ಮಾಲೀಕರನ್ನು ನೇರವಾಗಿ ಭೇಟಿ ಮಾಡಿ ಬಡಾವಣೆ ರಚನೆಗೆ ಭೂಮಿ ಕೊಟ್ಟರೆ ಆಗುವ ಪ್ರಯೋಜನ, ಯಾವುದೇ ಹಣ ಹೂಡಿಕೆ ಇಲ್ಲದೇ ಶೇ.50 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಬಯಸಿರುವ ವಿಚಾರವನ್ನು ಮನವರಿಕೆ ಮಾಡಿಕೊಟ್ಟರು. ಆಯುಕ್ತರ ಪ್ರಯತ್ನದ ಫಲವಾಗಿ ಇದೀಗ ಬಡಾವಣೆ ನಿರ್ಮಾಣವಾಗು ಕಾಲ ಸನ್ನಿಹಿತವಾಗಿದೆ.
20ಸಾವಿರ ನಿವೇಶನಗಳ ರಚನೆ: ದಿನದಿಂದ ದಿನಕ್ಕೆ ನಿವೇಶನಗಳ ಬೇಡಿಕೆ ಹೆಚ್ಚಾಗಿರುವುದಲ್ಲದೆ, ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿ ಬೆಲೆ ಹೆಚ್ಚಾಗಿರುವ ಕಾರಣ ಎಂಡಿಎ ಬಡಾವಣೆ ರಚನೆಯನ್ನೇ ಎದುರು ನೋಡುತ್ತಿದ್ದಾರೆ. ಮೈಸೂರು ತಾಲೂಕಿನ ಇಲವಾಲ ಹೋಬಳಿ ಬೊಮ್ಮೇನಹಳ್ಳಿ, ನಾಗವಾಲ, ಕಮ್ಮರಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿವಿಧ ಸರ್ವೇನಂಬರ್‌ಗಳನ್ನು ಗುರುತಿಸಿದ್ದು, ನಾಗವಾಲ 429.13, ಬೊಮ್ಮೇನಹಳ್ಳಿ- 766.33, ದೊಡ್ಡಮಾರಗೌಡನಹಳ್ಳಿ-326.38, ಕಮ್ಮರಹಳ್ಳಿ-336.20 ಎಕರೆ ಸೇರಿದಂತೆ 2113.24 ಎಕರೆಯನ್ನು ಗುರುತಿಸಲಾಗಿದೆ. ಈ ಗ್ರಾಮಗಳ ಒಟ್ಟು ಜಮೀನನ್ನು ಒಟ್ಟುಗೂಡಿಸಿ 20 ಸಾವಿರ ನಿವೇಶನಗಳ ರಚನೆಯಾಗಲಿದೆ. ಈ ಬಡಾವಣೆಯಾದರೆ ಇತರ ಗ್ರಾಮಗಳ ಜಮೀನುಗಳಿಗೂ ಭಾರೀ ಬೇಡಿಕೆ ಉಂಟಾಗುವುದರಿಂದ ನೂರಾರು ರೈತರು ಎದುರು ನೋಡುತ್ತಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾಗುವ ಕಾರಣ ಬೊಮ್ಮೇನಹಳ್ಳಿ ಬಡಾವಣೆಗೂ ಅನುಕೂಲವಾಗಲಿದೆ. ಈಗಾಗಲೇ ಪೆರಿಫೆರಲ್ ರಿಂಗ್ ರಸ್ತೆಗೆ ಮಾಡಿರುವ ಯೋಜನೆ ಪ್ರಕಾರ ಬೊಮ್ಮೇನಹಳ್ಳಿ ಹತ್ತು ಕಿ.ಮೀ ಸುತ್ತಳತೆಯಲ್ಲಿ ಇದೆ. ಹೀಗಾಗಿ, ಮುಂದೆ ದೊಡ್ಡ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆ ಇದೆ.