ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ
- ತನ್ನ ಆಸ್ತಿಗಳ ರಕ್ಷಣೆ, ಒತ್ತುವರಿ ತೆರವಿಗೆ ಪ್ರತ್ಯೇಕ ಪಡೆ ರಚಿಸಲು ಕ್ರಮ
- ಒತ್ತುವರಿ ತೆರವಿಗೆ ಪ್ರತ್ಯೇಕ ಪಡೆ ರಚನೆ
- ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿರುವವರನ್ನು ತೆರವು
ಮೈಸೂರು: ರಾಜ್ಯಾದ್ಯಂತ ಸದ್ದು ಮಾಡಿದ ಬಳಿಕ ಎಚ್ಚೆತ್ತುಕೊಂಡಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ತನ್ನ ಆಸ್ತಿ ರಕ್ಷಣೆಗೆ ಮುಂದಾಗಿದೆ.
ಎಲ್ಲೆಲ್ಲಿ ಆಸ್ತಿ ಇದೆ ಎಂದು ಗುರುತಿಸಿರುವ ಎಂಡಿಎ (ಮುಡಾ)ಅದರ ರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಪ್ರತ್ಯೇಕ ಪಡೆ ರಚನೆಗೆ ರೂಪರೇಷ ಸಲ್ಲಿಸುವುದಲ್ಲದೇ ಮೂರು ಕಾರ್ಯ ಪಡೆ (ಟಾಸ್ಕ್‌ಪೋರ್ಸ್) ರಚಿಸಿದೆ.
ಈ ಭದ್ರತಾ ಪಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಂಡಿಎ ಆಸ್ತಿ ಒತ್ತುವರಿ ಮಾಡಿರುವ ಹಾಗೂ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಭದ್ರತೆ ಒದಗಿಸುವುದರ ಜತೆಗೆ ಪ್ರಾಧಿಕಾರದ ಆಸ್ತಿ ಸಂರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಬದಲಿ ನಿವೇಶನ ನೀಡಿದ್ದು ರಾಜ್ಯದಲ್ಲಿ ಸದ್ದಾಗಿ ಲೋಕಾಯುಕ್ತ ತನಿಖೆಯನ್ನು ಎದುರಿಸಿ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಇದರಿಂದ ಪ್ರಾಧಿಕಾರದ ಆಸ್ತಿ ಲೆಕ್ಕ ಹಾಕಿದಾಗ ಸಾಕಷ್ಟು ಒತ್ತುವರಿ, ಅನಧಿಕೃತ ದಾಖಲೆ ನಿರ್ಮಿಸಿ ಕೆಲವರು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿತು. ಈಗಾಗಿ ಆಸ್ತಿ ರಕ್ಷಣೆಗೆ ಪ್ರತ್ಯೇಕ ಪಡೆ ರಚಿಸುವಂತೆ ಒತ್ತಾಯಗಳು ಕೇಳಿ ಬಂದವು.
ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಮೈಸೂರಿನಲ್ಲಿ ಪ್ರತ್ಯೇಕ ಪಡೆ ರಚಿಸುವ ಪ್ರಸ್ತಾಪ ಬಹಳ ವರ್ಷಗಳಿಂದ ಕೇಳಿ ಬಂದಿತ್ತಾದರೂ ಆದು ಕಾರ್ಯರೂಪಕ್ಕೆ ಬಂದಿರಲಿಲ್ಲ.
ಈಗ ಮುಡಾದಿಂದ ಎಂಡಿಎ ಅಗಿ ಬದಲಾವಣೆಗೊಂಡ ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ನೇಮಕಗೊಂಡ ಕೆ.ಆರ್.ರಕ್ಷಿತ್ ಅವರು ಈ ಪಡೆ ರಚನೆ ಮುಂದಾಗಿದ್ದಾರೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಆಸ್ತಿಗೆ ಅತಿಕ್ರಮ ಪ್ರವೇಶ ಹಾಗೂ ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿರುವವರನ್ನು ತೆರವುಗೊಳಿಸಲು ಈ ಪಡೆ ಅಗತ್ಯವಿರುತ್ತದೆ.
ಒತ್ತುವರಿ ಅಥವಾ ಅನಧಿಕೃತ ಆಸ್ತಿ ತೆರವು ಸಂದರ್ಭದಲ್ಲಿ ಪೊಲೀಸರ ನೆರವು ಕೋರಿದಾಗ ಸ್ಥಳೀಯ ಪೊಲೀಸರ ಕರ್ತವ್ಯ ಒತ್ತಡ ಇರುವುದರಿಂದ ಪ್ರಾಧಿಕಾರದ ಅಧಿಕಾರಿಗಳು ಕೋರಿದ ದಿನದಂದು ಭದ್ರತೆ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಅವರು, ಎಂಡಿಎ ಅಧ್ಯಕ್ಷರೂ ಅದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಭದ್ರತೆ ಪಡೆ ರಚಿಸುವ ಸಂಬಂಧ ಮನವಿ ಸಲ್ಲಿಸಿದರು.
ಈ ಬಗ್ಗೆ ಸವಿಸ್ತಾರವಾದ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಭದ್ರತಾ ಪಡೆಯಲ್ಲಿ ಒಬ್ಬರು ಸಹಾಯಕ ಪೊಲೀಸ್ ಆಯುಕ್ತ, ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್, ಮೂವರು ಸಬ್ ಇನ್ಸ್‌ಪೆಕ್ಟರ್, ನಾಲ್ವರು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಳಗೊಂಡಂತೆ 25 ಜನ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.
ಪ್ರತ್ಯೇಕ ಪಡೆ ಅಲ್ಲದೆ ಎಂಡಿಎ ಆಸ್ತಿಗಳನ್ನು ರಕ್ಷಿಸಲು ಮೂರು ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಈ ಪಡೆ ಎಲ್ಲೆಲ್ಲಿ ಅತಿಕ್ರಮ, ಅನಧಿಕೃತ ಕಟ್ಟಡಗಳಿವೆ ಎನ್ನುವುದನ್ನು ಗುರುತಿಸುವ ಕೆಲಸ ಮಾಡುತ್ತದೆ. ಜತೆಗೆ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ವೇಳೆ ಸ್ಥಳ ಪರಿಶೀಲನೆ ನಡೆಸಿ ಆಯುಕ್ತರಿಗೆ ವರದಿ ನೀಡುತ್ತದೆ.
ಇದರಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಪ್ರಾಧಿಕಾರದ ಆಸ್ತಿಯನ್ನು ಅತಿಕ್ರಮಿಸಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವ, ಅನುಭವದಲ್ಲಿರುವ ಸ್ಥಳಗಳನ್ನು ದಾಖಲೆ ಮೂಲಕ ಭೌತಿಕವಾಗಿ ಗುರುತಿಸಿ, ಒತ್ತುವರಿಯಾಗಿರುವುದು ದೃಢಪಟ್ಟ ನಂತರ ತೆರವು ಕಾರ್ಯಾಚರಣೆ ಕೈಗೊಂಡು ಸ್ಥಳದಲ್ಲಿ ನಾಮಫಲಕ ಮತ್ತು ಆಸ್ತಿಗೆ ತಂತಿ ಬೇಲಿ ಅಳವಡಿಕೆ ಮಾಡುತ್ತದೆ. ಒಂದು ತಂಡದಲ್ಲಿ ಎಂಡಿಎ ಇಇ ನೇತೃತ್ವದ ತಂಡದಲ್ಲಿ ವಿಶೇಷ ತಹಸೀಲ್ದಾರ್, ಕಚೇರಿ ವ್ಯವಸ್ಥಾಪಕ, ರಾಜಸ್ವ ನಿರೀಕ್ಷಕ, ಭೂ ಮಾಪಕ, ದ್ವಿತಿಯ ದರ್ಜೆ ಸಹಾಯಕ ಇರಲಿದ್ದಾರೆ. ಮತ್ತೊಂದು ತಂಡದಲ್ಲಿ ಇಇ ನೇತೃತ್ವದ ತಂಡದಲ್ಲಿ ವಿಶೇಷ ತಹಸೀಲ್ದಾರ್, ಪ್ರಥಮ ದರ್ಜೆ ಸಹಾಯಕ, ರಾಜಸ್ವ ನಿರೀಕ್ಷಕ, ಭೂಮಾಪಕ ಇರಲಿದ್ದಾರೆ. ಇನ್ನೊಂದು ತಂಡದಲ್ಲಿ ವಿಶೇಷ ತಹಸೀಲ್ದಾರ್ ನೇತೃತ್ವದ ತಂಡದಲ್ಲಿ ಕಚೇರಿ ವ್ಯವಸ್ಥಾಪಕ, ರಾಜಸ್ವ ನಿರೀಕ್ಷಕರು, ಭೂ ಮಾಪಕರು ಇರಲಿದ್ದಾರೆ.
ಒತ್ತುವರಿ ತೆರವಿಗೆ ಕಾರ್ಯಪಡೆ ರಚನೆ
ಎಂಡಿಎ ಆಸ್ತಿ ರಕ್ಷಣೆ, ಒತ್ತುವರಿ ತೆರವು, ಅತಿಕ್ರಮ ಪ್ರವೇಶವನ್ನು ತಡೆಯಲು ಸ್ಥಳೀಯ ಪೊಲೀಸರನ್ನು ಕೋರಿದ್ದಾರೆ. ಕೆಲವೊಮ್ಮೆ ಕಾರ್ಯ ಒತ್ತಡದಿಂದ ಸಮಯಕ್ಕೆ ಸರಿಯಾಗಿ ತೆರವು ಕಾರ್ಯ ನಡೆಯುವುದಿಲ್ಲ. ಈ ವೇಳೆ ಕೆಲವರು ನ್ಯಾಯಾಲಯದ ಮೊರೆ ಹೋಗುವುದರಿಂದ ಅದು ಇತ್ಯಾರ್ಥವಾಗುವವರೆವಿಗೂ ವಿಳಂಬವಾಗುತ್ತಿತ್ತು. ಆದ್ದರಿಂದ ಪ್ರತ್ಯೇಕ ಪೊಲೀಸ್ ಪಡೆ ಇದ್ದರೆ ಅನುಕೂಲ ಎನ್ನುವ ಕಾರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆ.ಆರ್.ರಕ್ಷಿತ್, ಆಯುಕ್ತ, ಎಂಡಿಎ