ಮೈಸೂರು: ಮೈಸೂರು ದಸರಾ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಕಂಬಳವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಈ ಬಾರಿಯ ದಸರಾ ಉತ್ಸವದಲ್ಲಿ ಕಂಬಳ ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು. ಸರಿಯಾದ ಸ್ಥಳ ದೊರಕದ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಈ ಬಾರಿ ವಿಜಯನಗರ ಮೊದಲನೇ ಹಂತ, ವಿಜಯನಗರ ನಾಲ್ಕನೇ ಹಂತ ಅಥವಾ ಸಾತಗಳ್ಳಿ ರಿಂಗ್ ರೋಡ್ ರಸ್ತೆಯ ಬಳಿ ಕಂಬಳ ಆಯೋಜಿಸಲು ಸ್ಥಳ ಗುರುತಿಸಲಾಗಿದ್ದು, ಈ ಪೈಕಿ ಒಂದು ಸ್ಥಳವನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಬೇಕಿದ್ದು, ಸ್ಥಳ ಆಯ್ಕೆ ಮಾಡುವಾಗ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಿರುವ ಸ್ಥಳವನ್ನು ನೋಡಿ ಆಯ್ಕೆ ಮಾಡಲಾಗುವುದು. ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುವ ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಸಂಘದ ಬೆಂಗಳೂರಿನ ಕಾರ್ಯಾಧ್ಯಕ್ಷ ಮುರುಳಿಧರ್ ರೈ ಹಾಗೂ ಇತರರು ಇದ್ದರು.