ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು 
ಮೈಸೂರು

ಮೈಸೂರು: ಸ್ವಚ್ಛತೆಗೆ ಸಮುದಾಯ ಸಂಘಟಕರು

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವಾರ್ಡ್‌ಗೆ ಒಬ್ಬರಂತೆ ಕಾರ್ಯನಿರ್ವಹಣೆ
  • ಜನರಿಂದ ಪ್ರತಿನಿತ್ಯ ಅಭಿಪ್ರಾಯ ಸಂಗ್ರಹ
ಮೈಸೂರು: ದೇಶದ ಸ್ವಚ್ಛ ನಗರಗಳ ಪೈಕಿ ಒಂದಾಗಿರುವ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯದ ಮೇಲೆ ಕಣ್ಗಾವಲು ಇರಿಸಲು ಹಾಗೂ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಯಾವ ರೀತಿ ಮಾಡಬಹುದು ಎಂಬ ಅಭಿಪ್ರಾಯ ಸಂಗ್ರಹಿಸಲು ನಗರ ಪಾಲಿಕೆಯು ಸಮದಾಯ ಸಂಘಟಕರನ್ನು (ಕಮ್ಯುನಿಟಿ ಮೊಬಿಲೈಜರ್) ನೇಮಕ ಮಾಡಿದೆ.
ನಗರವು ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆದರೂ ಸಹ ‘ನಮ್ಮ ವಾರ್ಡ್‌ನಲ್ಲಿ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸುತ್ತಿಲ್ಲ’, ವಾರ್ಡ್‌ಗಳ ರಸ್ತೆಗಳನ್ನು ಶುಚಿಗೊಳಿಸುತ್ತಿಲ್ಲ, ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಾಣಿಸಿಕೊಳ್ಳುತ್ತಿದೆ ಎಂಬ ದೂರುಗಳಿಗೆ ಕೊರತೆ ಏನು ಇಲ್ಲ. ನಗರವನ್ನು ಶುಚಿಯಾಗಿಟ್ಟು ಇನ್ನು ಮುಂದೆ ಇಂತಹ ದೂರುಗಳು ಬಾರದಂತೆ ಮಾಡಲು ಜನರ ಸಹಕಾರವೂ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಜನರು ಹಾಗೂ ಅಧಿಕಾರಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಸಮುದಾಯ ಸಂಘಟಕರ ಅವಶ್ಯಕತೆ ಇರುವುದನ್ನು ಮನಗಂಡು ಪಾಲಿಕೆಯ 65 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಸಮುದಾಯ ಸಂಘಟಕರನ್ನು ನೇಮಕ ಮಾಡಲಾಗುತ್ತಿದ್ದು, ಈಗಾಗಲೇ 39 ವಾರ್ಡ್‌ಗಳಲ್ಲಿ ಸಮುದಾಯ ಸಂಘಟಕರು ಕಾರ್ಯನಿರ್ವಹಿಸುತ್ತಿದ್ದು, ಉಳಿದ ವಾರ್ಡ್‌ಗಳಿಗೆ ನೇಮಕಾತಿ ನಡೆಯಬೇಕಾಗಿದೆ.
ಸ್ವ ಸಹಾಯ ಸಂಘದ ಸದಸ್ಯರು ಅಥವಾ ಯಾವುದೇ ವ್ಯಕ್ತಿ ಸಮುದಾಯ ಸಂಘಟಕರಾಗಿ ಸೇವೆ ಸಲ್ಲಿಸಬಹುದು. ಇವರಿಗೆ ನಗರ ಪಾಲಿಕೆಯಿಂದ ವೇತನ ಸಹ ದೊರೆಯಲಿದೆ. ಪ್ರತಿನಿತ್ಯ ಬೆಳಗ್ಗೆ 6.30 ರಿಂದ 8.30ರ ಅವಧಿಯಲ್ಲಿ ಪೌರ ಕಾರ್ಮಿಕರು ನಗರದ ಮನೆ ಮನೆಗಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಈ ಸಂದರ್ಭ ಸಮುದಾಯ ಸಂಘಟಕರು ಪೌರ ಕಾರ್ಮಿಕರ ಜತೆಗೂಡಿ ತೆರಳಿ ಅಥವಾ ಬೇರೆಯಾಗಿ ತೆರಳಿ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಆ ಅಭಿಪ್ರಾಯವನ್ನು ನಗರ ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಾರೆ. ಇವರು ನೀಡುವ ವರದಿಯ ಆಧಾರದ ಮೇಲೆ ಸ್ವಚ್ಛತಾ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ಪ್ರತಿ ಮನೆಗಳಿಂದ ಪ್ರತಿನಿತ್ಯ ತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸವಾಗಿ ಬೇರ್ಪಡಿಸಿ ಪಡೆಯಲಾಗುತ್ತಿದೆಯೇ? ಈ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆಯೇ? ಪೌರ ಕಾರ್ಮಿಕರ ಹಾಜರಾತಿ ಪ್ರಮಾಣ ಹೇಗಿದೆ ಮುಂತಾದ ಮಾಹಿತಿಯನ್ನು ಸಮುದಾಯ ಸಂಚಾಲಕರು ಕಲೆಹಾಕುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡಲಿದ್ದಾರೆ.

ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ಪಡೆದ ದೇಶದ ಕೆಲವೇ ಕೆಲವು ನಗರಗಳ ಪೈಕಿ ಮೈಸೂರು ಸಹ ಒಂದಾಗಿದೆ. ಮುಂದಿನ ಬಾರಿಯೂ ಸಹ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರಲು ನಗರ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ಸಮುದಾಯ ಸಂಘಟಕರ ನೇಮಕಾತಿಯಿಂದ ಸ್ವಚ್ಛತೆಯಲ್ಲಿ ಮತ್ತಷ್ಟು ಸುಧಾರಣೆಯನ್ನು ನಿರೀಕ್ಷಿಸಲಾ ಗುತ್ತಿದೆ.
2023 ಹಾಗೂ ಅದಕ್ಕಿಂತ ಹಿಂದೆ ನಡೆದ ಸರ್ವೇಕ್ಷಣೆಯಲ್ಲಿ ಸಿಟಿಜನ್ ಫೀಡ್‌ಬ್ಯಾಕ್‌ಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಆ ಸಂದರ್ಭ ಈ ವಿಭಾಗಕ್ಕೆ 2,250 ಅಂಕಗಳನ್ನು ನೀಡಲಾಗುತಿತ್ತು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಚ್ಚಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಕಳೆದ ಬಾರಿ ಈ ವಿಭಾಗಕ್ಕೆ ಕೇವಲ 500 ಅಂಕಗಳು ಮಾತ್ರ ನಿಗದಿಪಡಿಸಲಾಯಿತು. ಹೀಗಾಗಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಅಭಿಪ್ರಾಯವೊಂದರಿಂದಲೇ ಮೈಸೂರು ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ಸಾಧ್ಯವಿಲ್ಲ. ನಗರದ ಪ್ರತಿಯೊಂದು ಬಡಾವಣೆಗಳು ಶುಚಿಯಾಗಿ ಇದ್ದರಷ್ಟೇ ಪ್ರಶಸ್ತಿ ದೊರೆಯಲು ಸಾಧ್ಯ. ಹೀಗಾಗಿ ನಗರದಲ್ಲಿ ನಡೆಯುವ ಸ್ವಚ್ಛತಾ ಕಾರ್ಯದ ಮೇಲೆ ಕಣ್ಗಾವಲು ಇರಿಸುವುದು ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮುದಾಯ ಸಂಘಟಕರನ್ನು ನೇಮಕ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ನಗರವನ್ನು ಶುಚಿಯಾಗಿ ಇಡಲು ನಗರದ ನಾಗರಿಕರ ಸಹಕಾರ ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಆಗಬೇಕಾ ಗಿರುವ ಸುಧಾರಣೆಗಳ ಕುರಿತು ಜನರಿಂದ ಅಭಿಪ್ರಾಯ ಪಡೆದು ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರುವ ಉದ್ದೇಶದಿಂದ ಪ್ರತಿ ವಾರ್ಡ್‌ಗೆ ಒಬ್ಬರಂತೆ 65 ವಾರ್ಡ್‌ಗಳಿಗೆ ಸಮುದಾಯ ಸಂಘಟಕರನ್ನು ನೇಮಕ ಮಾಡಲಾಗುತ್ತಿದೆ. ಈ ಸಮುದಾಯ ಸಂಘಟಕರು ಪ್ರತಿ ವಾರ್ಡ್‌ನ ಮನೆ ಮನೆಗಳಿಗೆ ತೆರಳಿ ವಾರ್ಡ್‌ನ ಸ್ವಚ್ಛತೆಯ ಕುರಿತು ಜನರಿಂದ ಮಾಹಿತಿ ಸಂಗ್ರಹಿ ನಮಗೆ ವರದಿ ಮಾಡುತ್ತಾರೆ. ಈ ವರದಿಯ ಆಧಾರದ ಮೇಲೆ ಮೈಸೂರನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಲು ಶ್ರಮಿಸಲಾಗುವುದು.
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ