ಮೈಸೂರು ನಗರ ಪೊಲೀಸರು ವಶಪಡೆಸಿಕೊಂಡಿದ್ದ ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಸುಂದರ್‌ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ರವಿಶಂಕರ್, ಮ್ಯಾಥ್ಯೂ ಥಾಮಸ್, ಮಹಮ್ಮದ್ ಶರೀಫ್ ರಾವುತರ್ ಇದ್ದರು. 
ಮೈಸೂರು

ಮೈಸೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಆರು ತಿಂಗಳಲ್ಲಿ 105 ಸ್ವತ್ತು ಕಳವು ಪ್ರಕರಣ ಭೇದಿಸಿ, 82 ಆರೋಪಿಗಳ ಬಂಧನ

ಪ್ರಮುಖ ಮುಖ್ಯಾಂಶಗಳು

  • ಮಾಲೀಕರಿಗೆ 2.96 ಕೋಟಿ ರೂ. ಮೌಲ್ಯದ ಸ್ವತ್ತು ಹಸ್ತಾಂತರ
  • ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ
  • 10,03,000 ರೂ. ನಗದು ಹಾಗೂ 33 ಕೆ.ಜಿ. ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ
ಮೈಸೂರು: ಮೈಸೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಆರು ತಿಂಗಳಲ್ಲಿ ನಡೆದಿದ್ದ ಸರಗಳ್ಳತನ, ಮನೆ ಕಳ್ಳತನ, ವಾಹನ ಕಳ್ಳತನ ಸೇರಿದಂತೆ 2,96,36,000 ರೂ. ಮೌಲ್ಯದ 105 ಸ್ವತ್ತು ಕಳವು ಪ್ರಕರಣ ಭೇದಿಸಿದ್ದು, ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಜತೆಗೆ ಕಳೆದ 55 ದಿನಗಳಲ್ಲಿ 22 ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳಲ್ಲಿ 30 ಕೆ.ಜಿ. 255 ಗ್ರಾಂ ಗಾಂಜಾ, 311 ಗ್ರಾಂ 579 ಮಿ.ಗ್ರಾಂ ಸಿಂಥೆಟಿಕ್ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಪ್ರಕರಣಗಳ ಸಂಬಂಧ 82 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
105 ಸ್ವತ್ತು ಕಳವು ಪ್ರಕರಣ ಪೈಕಿ 1 ದರೋಡೆ, 1 ದರೋಡೆಗೆ ಸಂಚು, 4 ಸುಲಿಗೆ, 2 ಸರಗಳ್ಳತನ, 26 ಕನ್ನ ಕಳವು, 9 ಮನೆ ಕಳ್ಳತನ, 3 ಮನೆ ಕೆಲಸದವರಿಂದ ಕಳ್ಳತನ, 57 ವಾಹನ ಕಳ್ಳತನ, 4 ಸಾಮಾನ್ಯ ಕಳ್ಳತನ, 1 ವಂಚನೆ ಹಾಗೂ 1 ಕರ್ನಾಟಕ ಫಾರೆಸ್ಟ್ ಆಕ್ಟ್ ಸೇರಿದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಒಟ್ಟಾರೆ 2 ಕೆ.ಜಿ. 54 ಗ್ರಾಂ ಚಿನ್ನಾಭರಣ, 5 ಕೆ.ಜಿ. 312 ಗ್ರಾಂ ಬೆಳ್ಳಿ ಪದಾರ್ಥ, 49 ದ್ವಿಚಕ್ರ ವಾಹನ, 3 ಕಾರು, 1 ಥಾರ್ ಜೀಪ್, 2 ಲಾರಿ, 1 ಗೂಡ್ಸ್ ವಾಹನ, 1 ಆಟೋ ರಿಕ್ಷಾ, 10,03,000 ರೂ. ನಗದು ಹಾಗೂ 33 ಕೆ.ಜಿ. ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

69 ಪ್ರಕರಣದ ಆರೋಪಿ ಬಂಧನ:

ಈ ಪೈಕಿ ಸರಸ್ವತಿಪುರಂ ಠಾಣಾ ಪೊಲೀಸರು 2 ಆರೋಪಿಗಳನ್ನು ಬಂಧಿಸಿ, 8 ಕನ್ನ ಕಳವು, 1 ವಾಹನ ಕಳವು ಸೇರಿದಂತೆ ಒಟ್ಟು 9 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. 80,50,000 ರೂ. ಮೌಲ್ಯದ 529 ಗ್ರಾಂ ಚಿನ್ನಾಭರಣ, 1 ಕೆಜಿ 412 ಗ್ರಾಂ ಬೆಳ್ಳಿ ಪದಾರ್ಥ, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಸೈಯದ್ ಅಲಿಂ ಎಂಬಾತನ ವಿರುದ್ಧ ರಾಜ್ಯದ ಮತ್ತು ಹೊರ ರಾಜ್ಯದ ವಿವಿಧೆಡೆ 69 ಪ್ರಕರಣ ದಾಖಲಾಗಿದ್ದು, 2013ರಿಂದ ಕಳವು ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಮಾಹಿತಿ ನೀಡಿದರು.

ಗೂಗಲ್ ನೋಡಿ ಕಳ್ಳತನ ಮಾಡುತ್ತಿದ್ದ!

ಗೂಗಲ್ ಮ್ಯಾಪ್‌ನಲ್ಲಿ ಒಂಟಿಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವೆಂಕಟರೆಡ್ಡಿಯನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ. ಈತ ಗೂಗಲ್ ಮ್ಯಾಪ್‌ನಲ್ಲಿ 3 ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿದ್ದ. ಪ್ರಕರಣದ ತನಿಖೆ ವೇಳೆ ಸಿಸಿಟಿವಿಯಲ್ಲಿ ಆರೋಪಿಯ ಗುರುತು ಪತ್ತೆಯಾಗಿದೆ. ಬಳಿಕ ನ್ಯಾಕ್ ಗಿಡ್ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳ ಮಂಜ ಬಂಧನ!

ಚಾಮರಾಜನಗರ ಮೂಲದ ಕಳ್ಳ ಮಂಜ ಎಂಬಾತ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ. ಆತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಕುವೆಂಪುನಗರ ರಾಘವೇಂದ್ರಸ್ವಾಮಿ ಮಠ ಸೇರಿದಂತೆ ಎರಡು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ, ಹುಂಡಿ, ದೇವರ ತಾಳಿ ಮತ್ತಿತರ ಆಭರಣಗಳನ್ನು ಕಳವು ಮಾಡಿದ್ದಾಗಿ ಕುವೆಂಪುನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಒಟ್ಟಾರೆ ಕುವೆಂಪುನಗರ ಠಾಣಾ ಪೊಲೀಸರು 10 ಆರೋಪಿಗಳನ್ನು ಬಂಧಿಸಿ, 9 ಕನ್ನ ಕಳವು, 2 ಮನೆ ಕಳ್ಳತನ, 2 ಕೆಲಸದವರಿಂದ ಕಳ್ಳತನ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿ 63,00,000 ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ, 960 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 9.40,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಳ್ಳನಾದ ಐಟಿಐ ಉಪನ್ಯಾಸಕ!

ಐಟಿಐ ಕಾಲೇಜು ಒಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಹಾಗೂ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಮ್ಮ ಮನೆಯ ಸಮೀಪದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಮುರಿದು ಕಳವು ಮಾಡಿದ್ದ. ಈತನಿಂದ 25.08 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಉಳಿದಂತೆ ಲಷ್ಕರ್ ಠಾಣಾ ಪೊಲೀಸರು 6 ಆರೋಪಿಗಳನ್ನು ಬಂಧಿಸಿ 45,00,000 ರೂ. ಮೌಲ್ಯದ 3 ಮನೆ ಕಳ್ಳತನ, 40 ವಾಹನ ಕಳವು ಪ್ರಕರಣ, 1 ಚಿನ್ನ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ 324 ಗ್ರಾಂ ಚಿನ್ನಾಭರಣ, 3 ದ್ವಿ ಚಕ್ರ ವಾಹನ ಮತ್ತು 1 ಆಟೋ ರಿಕ್ಷಾ ಪತ್ತೆ ಮಾಡಿದ್ದಾರೆ.
ಸಿಸಿಬಿ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, 11 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. 35,00,000 ರೂ. ಮೌಲ್ಯದ 2 ಲಾರಿ, 1 ಥಾರ್ ಜೀಪ್, 8 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ. ಮೇಟಗಳ್ಳಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದಾರೆ. 1 ಸುಲಿಗೆ, 7 ಕನ್ನ ಕಳವು, 1 ಮನೆ ಕಳವು, 1 ಕೆಲಸದವರಿಂದ ಕಳವು, 2 ವಾಹನ ಕಳವು, 1 ಸಾಮಾನ್ಯ ಕಳವು ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ವಿಜಯನಗರ ಪೊಲೀಸರು 6 ಆರೋಪಿಗಳನ್ನು ಬಂಧಿಸಿ, 1 ಸರಗಳ್ಳತನ, 3 ವಾಹನ ಕಳ್ಳತನ, 1 ಕೆಲಸದವರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಮಂಡಿ ಠಾಣಾ ಪೊಲೀಸರು 11 ಆರೋಪಿಗಳನ್ನು ಬಂಧಿಸಿ, 1 ಸುಲಿಗೆ ಹಾಗೂ 13 ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ನರಸಿಂಹರಾಜ ಪೊಲೀಸರು 9 ಆರೋಪಿಗಳನ್ನು ಬಂಧಿಸಿ, 2 ಸುಲಿಗೆ, 1 ಕನ್ನ ಕಳವು, 4-ವಾಹನ ಕಳವು, 1 ಕೆಎಫ್ ಕಾಯ್ದೆಯ ಒಟ್ಟು 8 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಗಾಂಜಾ ಅಮಾನತು

2026ನೇ ಸಾಲಿನಲ್ಲಿ 22 ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳಲ್ಲಿ 30 ಕೆ.ಜಿ., 255 ಗ್ರಾಂ ಗಾಂಜಾ, 311 ಗ್ರಾಂ 579 ಮಿ.ಗ್ರಾಂ. ಸಿಂಥೆಟಿಕ್ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಜತೆಗೆ 102 ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಂಗಳವಾರ ಕೂಡ ಉದಯಗಿರಿ ಪೊಲೀಸರು ರಾಜೀವ್‌ನಗರ 2ನೇ ಹಂತದಲ್ಲಿ ವರುಣ್ ಎಂಬಾತನನ್ನು ಬಂಧಿಸಿ, ಆತನಿಂದ 24 ಕೆ.ಜಿ. 485 ಗ್ರಾಂ ಗಾಂಜಾ ವಶಪಡೆಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಸಿಪಿ ಸುಂದರ್‌ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ರವಿಶಂಕರ್, ಮ್ಯಾಥ್ಯೂ ಥಾಮಸ್, ಮಹಮ್ಮದ್ ಶರೀಫ್ ರಾವುತರ್ ಇದ್ದರು.
"

ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳ ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಜಾರಿ ಮಾಡಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಣೆ, ಸಂಗ್ರಹ ನಿಯಂತ್ರಣ ಸಂಬಂಧ 2025-26ನೇ ಸಾಲಿನಲ್ಲಿ 16 ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ. ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡುವ ಸಂಬಂಧ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ರೌಡಿ ಪಿ. ಗಣೇಶ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದ ಆಜ್ಞೆ ಹೊರಡಿಸಲಾಗಿದೆ.