ಮೈಸೂರು ಮಹಾನಗರ ಪಾಲಿಕೆ  
ಮೈಸೂರು

ಮೈಸೂರು ನಗರ ಪಾಲಿಕೆ : ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹ

ಮೈಸೂರು: ಆರ್ಥಿಕ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿಂದೆ ಬಿದ್ದು ಗುತ್ತಿಗೆದಾರರಿಗೆ ಹಣ ಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದ ನಗರ ಪಾಲಿಕೆಯು ಪ್ರಸಕ್ತ ವರ್ಷ ತೆರಿಗೆ ವಸೂಲಾತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ತೋರಿದೆ.
ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕಾರಣ ಎರಡು ವರ್ಷಗಳಿಂದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿತು. ಅಲ್ಲದೆ, ಜನಪ್ರತಿನಿಧಿಗಳು ಇದ್ದ ಸಂದರ್ಭ ಸರ್ಕಾರದ ಗಮನ ಸೆಳೆದು ವಿಶೇಷ ಅನುದಾನ ತರುತ್ತಿದ್ದರು. ಆದರೆ, ಈ ಎಲ್ಲ ಅನುದಾನಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಸಹ ಸಮಸ್ಯೆ ಎದುರಾಗಿತ್ತು. ನಂತರ ನಗರ ಪಾಲಿಕೆ ಅಧಿಕಾರಿಗಳು ತೆರಿಗೆ ಸಂಗ್ರಹ ಚುರುಕುಗೊಳಿಸಿ ಇದೀಗ ಗುತ್ತಿಗೆದಾರರ ಬಿಲ್ ಪಾವತಿ ಮಾಡಿ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾದರಿಯಾಗಿದೆ.
ನಗರಪಾಲಿಕೆ ಆಯುಕ್ತರು, ಉಪ ಆಯುಕ್ತರು ಕೈಗೊಂಡ ಹಲವು ಸುಧಾರಣಾ ಕ್ರಮಗಳ ಪರಿಣಾಮ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಯಿತು. ತೆರಿಗೆ ಪಾವತಿಯಲ್ಲಿ ರಾಜ್ಯ ಸರ್ಕಾರ ಶೇ.5ರಷ್ಟು ರಿಯಾಯಿತಿಯನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಿದ್ದರಿಂದ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ. ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.82.97ರಷ್ಟು ತೆರಿಗೆ ಸಂಗ್ರಹ ಆಗಿದ್ದು, ಡಿಸೆಂಬರ್ ಅಂತ್ಯಕ್ಕೆ ಶೇ.100ರಷ್ಟು ಗುರಿ ಸಾಧಿಸುವ ಸಾಧ್ಯತೆ ಇದೆ.
ನಗರಪಾಲಿಕೆಯಲ್ಲಿ ಘೋಷಿತ ಮತ್ತು ಅಘೋಷಿತ ಸೇರಿದಂತೆ 2.30 ಲಕ್ಷ ಆಸ್ತಿಗಳು ಇದ್ದು, ಇದರಲ್ಲಿ ವಸತಿ 1,48,589, ವಾಣಿಜ್ಯ 7,184, ಖಾಲಿ ನಿವೇಶನ 23,252, ಕೈಗಾರಿಕೆ 328 ಆಸ್ತಿಗಳಿಂದ ವರ್ಷಕ್ಕೆ 150 ರಿಂದ 200 ಕೋಟಿ ರೂ.ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆಯಂತೆ ತೆರಿಗೆ ವಸೂಲಾತಿಯಾಗದ ಕಾರಣ ನಗರಪಾಲಿಕೆಯಲ್ಲಿ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿತ್ತು. ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಗಳ ಬಿಲ್ ಪಾವತಿ ಮಾಡಲು ಕೂಡ ಸಾಧ್ಯವಾಗದ ಕಾರಣ ಗುತ್ತಿಗೆದಾರರು ಪ್ರತಿಭಟನೆ ನಡೆಸಿ ಬಾಕಿ ಹಣ ಬಿಡುಗಡೆಗೆ ಒತ್ತಡ ಹೇರಿದ್ದರು. ಇದಲ್ಲದೆ, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ, ಮುಖ್ಯಮಂತ್ರಿಗಳ ನಗರೋತ್ಥಾನದಿಂದ ಅನುದಾನ ಕೂಡ ಬಿಡುಗಡೆ ಮಾಡದ ಕಾರಣ ಮತ್ತಷ್ಟು ಸಮಸ್ಯೆಯಾಗಿತ್ತು.
ಪ್ರಸ್ತುತ ಜಿಲ್ಲಾಧಿಖಾರಿಯಾಗಿರುವ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ನಗರಪಾಲಿಕೆ ಆಯುಕ್ತರಾಗಿದ್ದಾಗ ತೆರಿಗೆ ಪಾವತಿ ಸರಳೀಕರಣ ಗೊಳಿಸುವ ಮೂಲಕ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸಿದ್ದರು. ನಂತರ ಬಂದ ಆಯುಕ್ತರು ಅದನ್ನೇ ಮುಂದುವರಿಸಿದ್ದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಾಗಿ ನಡೆಯುತ್ತಿದೆ.
ಹೊಸದಾಗಿ ನಗರ ಪಾಲಿಕೆ ಆಯುಕ್ತರಾಗಿ ಆಗಮಿಸಿದ ಶೇಖ್ ತನ್ವೀರ್ ಆಸಿಫ್ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ಗುರಿ ಇಟ್ಟುಕೊಂಡು ತೆರಿಗೆ ವಸೂಲಾತಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರಪಾಲಿಕೆಯ ಎಲ್ಲ 9 ವಲಯ ಕಚೇರಿಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ ತೆರಿಗೆ ಸಂಗ್ರಹದ ಜವಾಬ್ದಾರಿ ವಹಿಸಿದರು. ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಪ್ರತಿನಿತ್ಯ ಸಭೆ ನಡೆಸುವ ಮೂಲಕ ತೆರಿಗೆ ಸಂಗ್ರಹದ ಮಾಹಿತಿ ಪಡೆಯುತ್ತಿದ್ದಾರೆ. ಖುದ್ದಾಗಿ ಆಯುಕ್ತರೇ ಪ್ರತಿ ಶುಕ್ರವಾರ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಈ ಬಾರಿ ತೆರಿಗೆ ಸಂಗ್ರಹಣೆಯಲ್ಲಿ ಸಾಧನೆ ತೋರಲು ಸಾಧ್ಯವಾಗಿದೆ.
ತೆರಿಗೆ ವಸೂಲಾತಿ ವಿವರ (ಕೋಟಿ ರೂ.ಗಳಲ್ಲಿ)
ಆರ್ಥಿಕ ವರ್ಷ ಒಟ್ಟು ಗುರಿ ವಸೂಲಾತಿ ಶೇಕಡಾವಾರು
2022-23 202.97 168.56 ಶೇ.83.05
2023-24 214.58 183.83 ಶೇ.86.00
2024-25 251.42 229.11 ಶೇ. 91.13
2025-26(ಅಕ್ಟೋಬರ್ ಅಂತ್ಯಕ್ಕೆ) 243.66 202.16 ಶೇ. 82.97
ತೆರಿಗೆ ವಸೂಲಾತಿಯ ಕಡೆಗೆ ಈ ಬಾರಿ ಹೆಚ್ಚಿನ ಒತ್ತು ನೀಡಲಾಗಿದೆ. ಇದಕೋಸ್ಕರ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ನಗರ ಪಾಲಿಕೆಯು ಶೇ.82.97 ರಷ್ಟು ತೆರಿಗೆ ಸಂಗ್ರಹ ಮಾಡಿದೆ. ಇದರ ಜತೆಗೆ ರಾಜ್ಯ ಸರ್ಕಾರ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತೆರಿಗೆ ಪಾವತಿಸಲು ಆಸಕ್ತಿ ತೋರಿದರು. ಪಾಲಿಕೆ ಆಯುಕ್ತರು ಪ್ರತಿವಾರ ನೋಡಲ್ ಅಧಿಕಾರಿಗಳ ಸಭೆ ನಡೆಸಿ ವಾರ್ಡ್‌ವಾರು, ವಲಯವಾರು ಮಾಹಿತಿ ಪಡೆದ ಪರಿಣಾಮ ನಿರೀಕ್ಷೆಗೂ ಮೀರಿ ಈ ಬಾರಿ ತೆರಿಗೆ ಸಂಗ್ರಹವಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಶೇ.100ರಷ್ಟು ಗುರಿ ಸಾಧಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ.
ಜಿ.ಎಸ್.ಸೋಮಶೇಖರ್, ಉಪ ಆಯುಕ್ತರು (ಕಂದಾಯ), ನಗರಪಾಲಿಕೆ