ನಿಯಮ ಉಲ್ಲಂಘಿಸಿದ ಉದ್ದಿಮೆಯೊಂದನ್ನು ಬಂದ್ ಮಾಡಿದ ಮೈಸೂರು ನಗರ ಪಾಲಿಕೆ ಅಧಿಕಾರಿಗಳು 
ಮೈಸೂರು

ಮೈಸೂರಿನಲ್ಲಿ 13 ಉದ್ದಿಮೆಗಳಿಗೆ ಬೀಗ ಜಡಿದ ನಗರ ಪಾಲಿಕೆ

ಮೈಸೂರು: ನಗರದ ದಟ್ಟಗಳ್ಳಿಯ ಮಾರಾ ರೆಸ್ಟೋ ಪಬ್ ಅಗ್ನಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್ ಹಾಗೂ ಇತರೆ ವಾಣಿಜ್ಯ ಉದ್ದಿಮೆಗಳ ಪರಿಶೀಲನಾ ಕಾರ್ಯಾಚರಣೆ ಮುಂದುವರೆಸಿದ್ದು, ಶನಿವಾರ 13 ಉದ್ದಿಮೆಗಳನ್ನು ಮುಚ್ಚಿದೆ.
ಒಟ್ಟು 39 ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವುಗಳಲ್ಲಿ 13 ಉದ್ದಿಮೆಗಳನ್ನು ಮುಚ್ಚಲಾಗಿದೆ. 26 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಉದ್ದಿಮೆಗಳು ಟ್ರೇಡ್ ಲೈಸೆನ್ಸ್ ಪಡೆದಿವೆಯೇ? ಅಗ್ನಿ ಸುರಕ್ಷತೆ, ಸಾರ್ವಜನಿಕ ಸುರಕ್ಷತೆ, ಕಟ್ಟಡ ಅನುಮತಿ ಹಾಗೂ ಇತರೆ ನಿಯಮಾನುಸಾರ ಅನುಮತಿಗಳನ್ನು ಪಡೆದಿವೆಯೇ? ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಿವೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಎಲ್ಲ ಉದ್ದಿಮೆಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಷರತ್ತುಗಳು, ಅಗ್ನಿ ಸುರಕ್ಷತಾ ನಿಯಮಗಳು, ಸಾರ್ವಜನಿಕ ಸುರಕ್ಷತಾ ಕ್ರಮಗಳು, ಸ್ವಚ್ಛತೆ ಮತ್ತು ನೈರ್ಮಲ್ಯ ಮಾನದಂಡಗಳು, ಕಟ್ಟಡ ಅನುಮತಿ ಷರತ್ತುಗಳು ಹಾಗೂ ಅನ್ವಯಿಸುವ ಇತರೆ ಕಾನೂನು ನಿಯಮಗಳನ್ನು ಪಾಲಿಸಬೇಕು, ಇಲ್ಲವಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪಾಲಿಕೆ ಆಯುಕ್ತೆ ಶೇಖ್ ತನ್ವೀರ್ ಆಸಿಫ್ ಎಚ್ಚರಿಸಿದ್ದಾರೆ.