ಮೈಸೂರು ಮಹಾನಗರ ಪಾಲಿಕೆ 
ಮೈಸೂರು

ಮೈಸೂರು ನಗರ ಪಾಲಿಕೆ : ಅಧಿಕಾರಿಗಳ ಆಡಳಿತಕ್ಕೆ 2 ವರ್ಷ

ಪ್ರಮುಖ ಮುಖ್ಯಾಂಶಗಳು

  • ನಗರ ಪಾಲಿಕೆ ಚುನಾವಣೆ ಎಂದು ?
  • ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲ
  • ರಚನೆಯಾಗುವುದೇ ಗ್ರೇಟರ್ ಮೈಸೂರು
ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಯ ಅಧಿಕಾರಾವಧಿ ಮುಕ್ತಾಯಗೊಂಡು 2 ವರ್ಷ ಪೂರ್ಣಗೊಂಡಿದ್ದು, ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಹೀಗಾಗಿ ಪಾಲಿಕೆಗೆ ಚುನಾವಣೆ ಎಂದು ನಡೆಯಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಕಳೆದ ಕೌನ್ಸಿಲ್‌ನ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು. ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018ರಂದು ಚುನಾವಣೆ ನಡೆದಿತ್ತು. ನವೆಂಬರ್ 17 ರಂದು ಆ ಅವಧಿಯ ಮೊದಲ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು.
ಅಧಿಕಾರಾವಧಿ ಮುಕ್ತಾಯಗೊಂಡ ನಂತರ ನಗರ ಪಾಲಿಕೆಗೆ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿ ದ್ದರು. ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳ ಸಭೆ ಕರೆದು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ, ನಗರದಲ್ಲಿ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದಲೂ ಮಾಹಿತಿ ಕಲೆ ಹಾಕಿದ್ದರು. ಆ ನಂತರ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಆ ನಂತರ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಸೋಲುವ ಭೀತಿಯಿಂದ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂಬ ಮಾತುಗಳು ರಾಜಕೀಯ ವಲದಯಲ್ಲಿ ಕೇಳಿ ಬರುತ್ತಿದೆ.
ಕಳೆದ ಅವಧಿಯ ಆಡಳಿತದಲ್ಲಿ ನಗರ ಪಾಲಿಕೆಯು ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಕಳೆದ ಬಾರಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು (ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್) ಅಧಿಕಾರ ಅನುಭವಿಸಿದ್ದು ವಿಶೇಷವಾಗಿತ್ತು. 2018ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ಹೀಗಾಗಿ ಪಾಲಿಕೆ ಚುನಾವಣೆ ನಡೆದ ನಂತರ ಮೇಯರ್ ಚುನಾವಣೆ ಸಂದರ್ಭ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿತ್ತು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಥನವಾದ ನಂತರ ಜೆಡಿಎಸ್‌ನ ಪರೋಕ್ಷ ಬೆಂಬಲದೊಂದಿಗೆ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಸೇರಿತು. ಹಾಗಾಗಿ ಪಾಲಿಕೆಗೆ ಇದೀಗ ಚುನಾವಣೆ ನಡೆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ.

ಗ್ರೇಟರ್ ಮೈಸೂರು ರಚನೆ

ರಾಜ್ಯ ಸರ್ಕಾರ ಗ್ರೇಟರ್ ಮೈಸೂರು ರಚನೆಯ ಪ್ರಸ್ತಾವನೆಯನ್ನು ಕೈ ಬಿಟ್ಟಿತ್ತು. ಆದರೆ, ಇದೀಗ ಮತ್ತೆ ಈ ಬಗ್ಗೆ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಚುನಾವಣೆ ಸದ್ಯಕ್ಕೆ ನಡೆಯುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ಹೀಗಾಗಿ ಮುಂದಿನ ವರ್ಷದವರೆಗೂ ನಗರ ಪಾಲಿಕೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್ ನಡೆಯಲಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರ ಪಾಲಿಕೆ ಸುತ್ತಮುತ್ತ ಇರುವ 5 ನಗರ ಸ್ಥಳೀಯ ಸಂಸ್ಥೆಗಳು, 7 ಗ್ರಾಮ ಪಂಚಾಯಿಗಳ 20 ಗ್ರಾಮಗಳನ್ನು ಒಟ್ಟು ಸೇರಿಸಿ ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.

ಕಳೆದ ಬಾರಿ 4 ಅವಧಿಯಲ್ಲಿ 6 ಮೇಯರ್..!

ನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಒಬ್ಬರು ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೊಳ್ಳಬೇಕು. ಕಳೆದ ಕೌನ್ಸಿಲ್‌ನಲ್ಲಿ 5 ವರ್ಷಗಳ ಅವಧಿಗೆ 5 ಮೇಯರ್ ಹಾಗೂ 5 ಉಪ ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಹಲವು ರಾಜಕೀಯ ಕಾರಣಗಳಿಗೊಸ್ಕರ ಕಳೆದ ಬಾರಿ ಕೇವಲ 4 ಅವಧಿಯಲ್ಲಿಯೇ 6 ಮೇಯರ್‌ಗಳು ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. 4ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಕಾಲದಲ್ಲಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ 3ನೇ ಅವಧಿ ವಿಸ್ತರಣೆಗೊಂಡು ಮೂವರು ಮೇಯರ್‌ಗಳು ಅಧಿಕಾರ ಅನುಭವಿಸಿದರು. 3ನೇ ಅವಧಿ ಒಂದು ವರ್ಷಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ ವಿವಿಧ ಕಾರಣಗಳಿಗೋಸ್ಕರ ಮೂವರು ಮೇಯರ್‌ಗಳು (ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್, ಸುನಂದ ಪಾಲನೇತ್ರ) ಒಟ್ಟಾರೆ 1 ವರ್ಷ 6 ತಿಂಗಳು ಅಧಿಕಾರ ನಡೆಸಿದರು. ಅಲ್ಲದೆ 2 ಹಾಗೂ 3ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸಲು ಕ್ರಮವಾಗಿ 2 ಮತ್ತು 1 ತಿಂಗಳು ವಿಳಂಬವಾಯಿತು. ಹೀಗಾಗಿ 5ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಿದ್ದರೆ ಅವರಿಗೆ ಕೇವಲ 2 ತಿಂಗಳು ಮಾತ್ರ ಅಧಿಕಾರಾವಧಿ ದೊರೆಯುತಿತ್ತು. ಕೇವಲ ಎರಡು ತಿಂಗಳಿಗೊಸ್ಕರ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ಸರ್ಕಾರ ಚುನಾವಣೆ ನಡೆಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಕಳೆದ ಅವಧಿಯಲ್ಲಿ 4 ಅವಧಿಯಲ್ಲಿಯೇ 6 ಮೇಯರ್‌ಗಳನ್ನು ಕಂಡಿತ್ತು.