ಮೈಸೂರು ನಗರದ ಇನ್ಫೋಸಿಸ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಮೈಸೂರು ಬಿಗ್ ಟೆಕ್ ಶೋ-2026’ ಸಂವಾದದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತ ಭಾಗವಹಿಸಿದರು.
ಮೈಸೂರು: ರಾಜ್ಯ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಕನಸಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ನಗರದ ಇನ್ಫೋಸಿಸ್‌ನಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ‘ಮೈಸೂರು ಬಿಗ್ ಟೆಕ್ ಶೋ-2026’ ಗುರುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಬಿಗ್ ಟೆಕ್ ಶೋನಲ್ಲಿ 105 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿ ತಮ್ಮ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಿದರು.
100ಕ್ಕೂ ಹೆಚ್ಚು ನವೋದ್ಯಮಗಳಿಗೆ ತಮ್ಮ ಹೊಸ ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಇವಿ, ಫಿನ್‌ಟೆಕ್, ಅಗ್ರಿಟೆಕ್ ಹಾಗೂ ಹೆಲ್ತ್‌ಟೆಕ್ ಕ್ಷೇತ್ರದ ಆರಂಭಿಕ ಹಂತದ ಕಂಪನಿಗಳು ತಮ್ಮ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಿದವು.
ಮೈಸೂರಿನ ಪ್ರಮುಖ ಇಎಸ್‌ಡಿಎಮ್ ಮತ್ತು ಸೆಮಿಕಂಡಕ್ಟರ್‌ಸಂಸ್ಥೆಗಳಾದ ಕೇನ್ಸ್ ಟೆಕ್ನಾಲಜೀಸ್, ಕೇನ್ಸ್ ಸೆಮಿಕಾನ್, ರಂಗ್‌ಸನ್ಸ್, ಪ್ರೊಕ್ಸೆಲೆರಾ ಹಾಗೂ ಐಎಲ್‌ಜಿನ್‌ಎಲೆಕ್ಟ್ರಾನಿಕ್ಸ್ ನಂತಹ ಪ್ರಮುಖ ಪ್ರದರ್ಶಕರು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸ ಕ್ಷೇತ್ರದ ತಮ್ಮ ಆಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಆಯೋಜಿಸಿದ್ದ ಈ ಎರಡು ದಿನಗಳ ಜಾಗತಿಕ ಶೃಂಗಸಭೆಯು, ಮೈಸೂರನ್ನು ರಾಜ್ಯದ ಪ್ರಮುಖ ತಂತ್ರಜ್ಞಾನ, ನಾವೀನ್ಯತೆ ಹಾಗೂ ಇಎಸ್‌ಡಿಎಮ್ ಕೇಂದ್ರವನ್ನಾಗಿ ರೂಪಿಸುವ ದೃಢ ಸಂಕಲ್ಪಕ್ಕೆ ಸಾಕ್ಷಿಯಾಯಿತು. ಈ ಬೃಹತ್ ಸಮಾವೇಶದಲ್ಲಿ 1,210ಕ್ಕೂ ಹೆಚ್ಚು ಪ್ರತಿನಿಧಿಗಳು, 250ಕ್ಕೂ ಹೆಚ್ಚು ನವೋದ್ಯಮಗಳು, 105ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ಜಾಗತಿಕ ವಕ್ತಾರರು ಹಾಗೂ 40ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಸೆಮಿಕಂಡಕ್ಟರ್ ಮತ್ತು ಫಿನ್‌ಟೆಕ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಹತ್ವದ ವಿಚಾರಗೋಷ್ಠಿಗಳು ನಡೆದವು.