ಹೀಲಿಯಂ ಗ್ಯಾಸ್ ಬಲೂನು 
ಮೈಸೂರು

ಮೈಸೂರು ಸಾರ್ವಜನಿಕ ಸ್ಥಳದಲ್ಲಿ ಹೀಲಿಯಂ ಅನಿಲ ಬಳಕೆ ನಿಷೇಧ

ಮೈಸೂರು: ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಜೀವ ರಕ್ಷಣೆಯ ಹಿತದೃಷ್ಟಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲವನ್ನು ಬಳಸಿ ಬಲೂನ್‌ಗಳು ಅಥವಾ ಇತರ ಯಾವುದೇ ವಸ್ತುಗಳನ್ನು ತುಂಬುವುದು, ಬಳಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಅರಮನೆ ಆವರಣದಲ್ಲಿ ಇತ್ತೀಚೆಗೆ ಹೀಲಿಯಂ ಅನಿಲ ಸಿಲಿಂಡರ್ ಸ್ಫೋಟಗೊಂಡು ಜೀವ ಹಾನಿ ಉಂಟಾಗಿತ್ತು. ಹೀಲಿಯಂ ಅನಿಲ ಬಳಸಿ ಬಲೂನ್‌ಗಳನ್ನು ತುಂಬುವ ಸಂದರ್ಭ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇವೆ. ಹೀಲಿಯಂ ಅನಿಲವು ಅತ್ಯಧಿಕ ಒತ್ತಡದಲ್ಲಿರುವ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅವುಗಳನ್ನು ಅಜಾಗರೂಕತೆಯಿಂದ ಅಥವಾ ಅಪ್ರಮಾಣಿತ ವಿಧಾನದಲ್ಲಿ ಬಳಸುವುದರಿಂದ ಸಿಲಿಂಡರ್ ಸ್ಫೋಟವಾಗುವ ಸಾಧ್ಯತೆಗಳು ಇವೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಹಬ್ಬಗಳು, ಜಾತ್ರೆಗಳು ಪ್ರವಾಸಿ ಸ್ಥಳಗಳು, ಸಾರ್ವಜನಿಕ ಸಮಾರಂಭಗಳು ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಕೆಯು ಸಾರ್ವಜನಿಕ ಜೀವನಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯಡಿ ನಗರದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸಮಾರಂಭಗಳು ಮುಂತಾದವುಗಳು ನಡೆಯುವ ಸ್ಥಳಗಳಲ್ಲಿ ಹೀಲಿಯಂ ಅನಿಲ ವನ್ನು ಬಳಸಿ ಬಲೂನ್‌ಗಳು ತುಂಬುವುದು, ಹೀಲಿಯಂ ಅನಿಲವನ್ನು ನಿರ್ದಿಷ್ಟಗೊಂಡ ಪ್ರಮಾಣಿತ ಸುರಕ್ಷತಾ ವಿಧಾನಗಳನ್ನು ಅನುಸರಿಸದೆ ಬಲೂನ್ ಮಾರಾಟಗಾರರು, ಕಾರ್ಯಕ್ರಮ ಆಯೋಜಕರು, ವ್ಯಾಪಾರಿಗಳು ಇತರೆ ಸಾರ್ವಜನಿಕರು ಇದನ್ನು ಸಂಗ್ರಹಿ ಸುವುದು ಮತ್ತು ಬಳಕೆ ಹಾಗೂ ಸಾಗಣೆ ಮಾಡುವುದು ಹಾಗೂ ಮಾರಾಟ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.