ಮೈಸೂರು ನಗರದ ತಿಪ್ಪಯ್ಯ ಕೆರೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು 
ಮೈಸೂರು

ಮೈಸೂರು: ತಿಪ್ಪಯ್ಯ ಕೆರೆ ಅಭಿವೃದ್ಧಿಗೆ ಕ್ರಮ : ಸಂಸದ ಯದುವೀರ್

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ತಿಪ್ಪಯ್ಯನ ಕೆರೆಗೆ ಒಳಚರಂಡಿ ನೀರು ಸೇರಿ ಸಂಪೂರ್ಣ ಮಲೀನಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶೀಘ್ರದಲ್ಲೇ ಕೆರೆಗೆ ಕಾಯಕಲ್ಪ ಕಲ್ಪಿಸುವುದಾಗಿ ಭರವಸೆ ನೀಡಿದರು.
ನಗರದ ಪೊಲೀಸ್ ಬಡಾವಣೆಗೆ ಹೊಂದಿಕೊಂಡಿರುವ ಐತಿಹಾಸಿಕ ತಿಪ್ಪಯ್ಯ ಕೆರೆ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆರೆಗೆ ಅಕ್ಕಪಕ್ಕದ ಆರೇಳು ಬಡಾವಣೆಗಳ ಒಳಚರಂಡಿಯ ಮಲೀನ ನೀರು ಸೇರುತ್ತಿರುವುದರ ಬಗ್ಗೆ ತೀವ್ರ ಬೇಸರ ಹೊರಹಾಕಿದರು.
ಕೆರೆಯ ಈ ದುಸ್ಥಿತಿ ಬಗ್ಗೆ ಬಡಾವಣೆಯ ನಿವಾಸಿಗಳು ಮಾಹಿತಿ ನೀಡಿದರು. ಬಡಾವಣೆಯ ನಿರ್ಮಾಣದ ವೇಳೆ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಂದರ್ಭದಲ್ಲಿ ಮಾಡಲಾದ ಅವೈಜ್ಞಾನಿಕ ಕಾಮಗಾರಿ ಹಾಗೂ ಸೆಫ್ಟಿಕ್ ಟ್ಯಾಂಕ್‌ನಿಂದಾಗಿ ಇಂದು ಇಡೀ ಕೆರೆ ಮಲೀನಗೊಂಡಿರುವುದರ ಬಗ್ಗೆ ಮಾಹಿತಿ ತಿಳಿದ ಒಡೆಯರ್, ಕೆರೆ ಸಂರಕ್ಷಣೆ ಕುರಿತು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ಪೂರಕವಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮೂರು ವರ್ಷದ ಹಿಂದೆ ತಿಳಿನೀರಿನಿಂದ ಹೊಳೆಯುತ್ತಿದ್ದ ತಿಪ್ಪಯ್ಯ ಕೆರೆ ಈಗ ಕತ್ತೆ ಕಿವಿ ಎಂಬ ತೇಲುವ ಕಳೆಯ ತಿಪ್ಪೆಯಾಗಿದೆ. ಜಲಚರಗಳು ಉಸಿರುಗಟ್ಟಿ ಸತ್ತರೆ, ಬಾನಾಡಿಗಳು ಕಾಣದಾಗಿವೆ ಎಂದು ಸ್ಥಳೀಯರು ಸಂಸದರಲ್ಲಿ ದೂರಿದರು.
ಕೆರೆಯ ಬಳಿ ನಿವೇಶನ ಖರೀದಿಸಿ ಮನೆ ಕಟ್ಟಿಸಿದವರ ಪಾಲಿಗೆ ಕೆರೆ ಇದೀಗ ರೌರವ ನರಕ ತೋರಿಸುತ್ತಿದೆ. ಹಂದಿ, ಸೊಳ್ಳೆ ಕಾಟ ಸೇರಿದಂತೆ ರೋಗರುಜಿನಗಳನ್ನೇ ಹೊತ್ತು ಕೂತಿದೆ ಎಂದು ಸ್ಥಳೀಯರು ಆರೋಪಿಸಿದರು.
ರಿಂಗ್ ರಸ್ತೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರದ ಮಧ್ಯೆ ಚಾಚಿರುವ ಕೆರೆಗೆ ನೇರವಾಗಿ ಒಳಚರಂಡಿ ನೀರು ಸೇರುತ್ತಿದೆ. ಮಳೆ ಬಂದು ಕೆರೆಯ ನೀರಿನ ಮಟ್ಟ ಏರಿದರೂ ನೀರು ತಿಳಿಯಾಗಿಲ್ಲ. ಕೊಳಚೆ ನೀರಿನಿಂದ ಕತ್ತೆ ಕಿವಿ ಕಳೆ ತುಂಬಿಹೋಗಿದ್ದು, ಆಟದ ಮೈದಾನದಂತೆ ಕಾಣುತ್ತದೆ ಎಂದರು.
ಈ ಕೆರೆಗೆ ಇದರ ಮೇಲ್ಭಾಗದಲ್ಲಿರುವ ಸಾತಿ ಕೆರೆಗೆ ಸಂಪರ್ಕಿಸಿರುವ ರಾಜಕಾಲುವೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಕೆರೆಯ ರಕ್ಷಣೆಯೂ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಈ ವೇಳೆ ಮಾಜಿ ಶಾಸಕ ಎಲ್. ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ್ ಗೌಡ, ಸ್ಥಳೀಯರಾದ ಥಾಮಸ್, ಶಿವಕುಮಾರ್, ಶ್ರೀಲಕ್ಷ್ಮೀ, ಭೋಜಪ್ಪ, ಮಹೇಶ್, ಮಹಾದೇವಪ್ಪ, ಸಿದ್ದರಾಮಪ್ಪ, ಹೊನ್ನಪ್ಪ ಹಾಗೂ ಇತರರು ಇದ್ದರು.
ಕೆರೆಯ ಚಿತ್ರಣ
ಲಲಿತಾದ್ರಿಪುರ ಗ್ರಾಮದ ಸರ್ವೇ ಸಂಖ್ಯೆ 31ರಲ್ಲಿ 6.17 ಎಕರೆ ಹಾಗೂ ಸರ್ವೇ ಸಂಖ್ಯೆ 30ರಲ್ಲಿ 9.01 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕೆರೆ, ರಿಂಗ್ ರಸ್ತೆಯ ಪಕ್ಕದಲ್ಲೇ ಇದೆ. ಗಿರಿದರ್ಶಿನಿ ಬಡಾವಣೆ, ಪೊಲೀಸ್ ಬಡಾವಣೆ, ಆಲನಹಳ್ಳಿಯ ಒಳಚರಂಡಿ ನೀರು ರಾಜ ಕಾಲುವೆಯ ಮೂಲಕ ಕೆರೆಯ ಒಡಲು ಸೇರುತ್ತಿದೆ. ಅದಲ್ಲದೆ, ಕೆರೆ ಸಮೀಪದಲ್ಲೇ ಮ್ಯಾನ್‌ಹೋಲ್‌ಗಳ ಬಾಯಿ ಕಳಚಿದ್ದು, ಹಂದಿಗಳ ಆವಾಸಸ್ಥಾನವಾಗಿದೆ. ನಗರದ ಪೂರ್ವಭಾಗದ ಬಡಾವಣೆಗಳ ಚರಂಡಿ ನೀರನ್ನು ಸಂಸ್ಕರಿಸುವ ಘಟಕ ತೆರೆಯುವ ಕೆಲಸವನ್ನು ಮುಡಾ ಮಾಡಿಲ್ಲ.
ಎಂಡಿಎ ನಿರ್ಲಕ್ಷೃ
ರಂದೀಪ್ ಜಿಲ್ಲಾಧಿಕಾರಿಯಾಗಿದ್ದಾಗ 2016-17ರಲ್ಲಿ ಆಟೊಮೋಟೀವ್ ಆ್ಯಕ್ಸಿಲ್ ಕಾರ್ಖಾನೆಯ ಸಿಎಸ್‌ಆರ್ ಹಣದಿಂದ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ಹೂಳು ತೆಗೆದು ಏರಿ ಮರು ನಿರ್ಮಿಸಲಾಗಿತ್ತು. 2018ರ ಏಪ್ರಿಲ್‌ನಲ್ಲಿ ಕೆರೆ ನಿರ್ವಹಣೆಯನ್ನು ಜಿಲ್ಲಾಡಳಿತ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ಅರಣ್ಯಿಕರಣ, ಹುಲ್ಲುಗಾವಲು ನಿರ್ಮಾಣವಾಗಿ ಸೌಂದರ್ಯವೂ ಇಮ್ಮಡಿಸಿತ್ತು. 2022ರಲ್ಲಿ ಎಸ್‌ಟಿಪಿ ಟ್ಯಾಂಕ್‌ಗಳನ್ನು ನಿರ್ಮಿಸಿ ಕೊಳಚೆ ನೀರು ಬರದಿರಲು ಕ್ರಮವಹಿಸುವುದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಹೇಳಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
400 ವರ್ಷದ ಇತಿಹಾಸ
ಸುಮಾರು 400 ವರ್ಷಗಳ ಹಿಂದೆ ಚಾಮುಂಡಿ ಬೆಟ್ಟದಿಂದ ಹರಿದು ಬರುವ ನೀರನ್ನು ಹಿಡಿದಿಡಲು ಬೆಟ್ಟದ 4 ಕಡೆಯೂ ಒಂದೊಂದು ಕೆರೆಯನ್ನು ನಿರ್ಮಿಸಲಾಗಿತ್ತು. ತಿಪ್ಪರಾಯ ಎಂಬ ಸೇನಾದಂಡನಾಯಕ ತನ್ನ ಕುದುರೆಗಳಿಗೆ ಇಲ್ಲಿ ನೀರು ಕುಡಿಸುತ್ತಿದ್ದುದರಿಂದ ಹಾಗೂ ಅವರು ಈ ಕೆರೆ ನಿರ್ವಹಣೆ ಮಾಡಿದ್ದರಿಂದ ಈ ಕೆರೆಗೆ ತಿಪ್ಪಯ್ಯ ಎಂಬ ಹೆಸರು ಬಂತು.