ಸರಗೂರು ಕೃಷ್ಣ  
ಮೈಸೂರು

20ರಿಂದ ಅಹೋರಾತ್ರಿ ಧರಣಿ

ಲೋಕೇಶ್ ಮನು. ಡಿ
ಎಚ್.ಡಿ. ಕೋಟೆ: ಸಾಗುವಳಿಗಾಗಿ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿರುವ ರೈತರು ನಿತ್ಯ ಸರಗೂರು ತಾಲೂಕು ಕಚೇರಿಗೆ ಅಲೆದಾಡಿದರೂ ಅರ್ಹ ರೈತರಿಗೆ ಇನ್ನೂ ಸಾಗುವಳಿ ಚೀಟಿ ನೀಡದೆ ಸತಾಯಿಸುತ್ತಿರುವ ತಹಸೀಲ್ದಾರ್, ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ನಿರ್ಲಕ್ಷ್ಯ ಖಂಡಿಸಿ ಜ.20ರಿಂದ ಸರಗೂರು ತಾಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸರಗೂರು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ತಿಳಿಸಿದರು.
ಕೆಲವರು ಸಾಗುವಳಿಗೆ ಅರ್ಜಿ ಹಾಕಿದ ವಾರದೊಳಗೆ ಹಿಂಬಾಗಿಲಿನಿಂದ ಹಕ್ಕುಪತ್ರ ಸಿಗುತ್ತಿದೆ. ಆದರೆ ಸರಗೂರು ತಾಲೂಕಿನ 60ಕ್ಕೂ ಹೆಚ್ಚು ರೈತರು ಈಗಾಗಲೇ ಸರ್ಕಾರಕ್ಕೆ ಕಿಮ್ಮತ್ತು ಹಣ ಕಟ್ಟಿದ್ದಾರೆ. 207 ರೈತರ ಫೈಲ್ ದರಖಾಸ್ತು ಕಮಿಟಿ ಪಾಸ್ ಆಗಿ ವರ್ಷ ಕಳೆದಿದೆ. ಈ ಬಗ್ಗೆ ರೈತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್, ಶಾಸಕರನ್ನು ಕೇಳಿದರೆ ನೆಪ ಹೇಳುತ್ತಾ ಕಾಲ ದೂಡುತ್ತಿದ್ದಾರೆ. ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದರು.
ತಾಲೂಕಿನ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡುವವರೆಗೂ ರೈತರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿ ಸ್ಥಳಕ್ಕೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಬರುವವರೆಗೂ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ತಾಲೂಕು ಭೂ ಹಕ್ಕುದಾರ ವೇದಿಕೆ ಅಧ್ಯಕ್ಷ ಮಹದೇವನಾಯಕ ಮಾತನಾಡಿ, ಸರಗೂರು ತಾಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ರೈತರು ತಾವು ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನಿನ ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 11,807 ಅರ್ಜಿಗಳ ಸಾಗುವಳಿ ನೀಡಬೇಕು. ಆದರೆ ಇನ್ನೂ ಸಾಗುವಳಿ ಚೀಟಿ ನೀಡಿಲ್ಲ. ಹೀಗಾಗಿ ರೈತ ತನ್ನ ಪೂರ್ವಿಕರ ಕಾಲದಿಂದಲೂ ಜಮೀನು ಉಳುಮೆ ಮಾಡಿಕೊಂಡು ಬರುತ್ತಿದ್ದರೂ ತನ್ನ ಬಳಿ ಜಮೀನಿದ್ದರೂ ಸರ್ಕಾರದ ಯಾವುದೆ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಭೂಹಕ್ಕುದಾರರ ವೇದಿಕೆ ಅಧ್ಯಕ್ಷ ಮಹದೇವನಾಯಕ, ರೈತ ಸಂಘದ ಸರಗೂರು ಅಧ್ಯಕ್ಷ ಚನ್ನನಾಯಕ, ರಾಘವೇಂದ್ರ ಇದ್ದರು.
ರೈತ ಸಂಘದ ಸರಗೂರು ತಾಲೂಕು ಘಟಕದ ಚನ್ನನಾಯಕ ಮಾತನಾಡಿ, ತಾಲೂಕಿನ ರೈತರನ್ನು ತಾಲೂಕು ಕಚೇರಿಗೆ ಅಲೆಸದೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಸಾಗುವಳಿ ಚೀಟಿ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ. ಆದರೆ ಇಲ್ಲಿನ ತಹಸೀಲ್ದಾರ್ ಮೋಹನ್ ಕುಮಾರಿ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಶಾಸಕರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ರೈತರು ಸಾಗುವಳಿ ಬಗ್ಗೆ ಮಾತನಾಡಲು ಹೋದರೆ ಉಡಾಫೆಯಾಗಿ ವರ್ತಿಸಿ ಉದ್ಧಟತನ ಮೆರೆಯುತ್ತಿದ್ದಾರೆ ಎಂದು ದೂರಿದರು.