ಸ್ವಚ್ಛ ಮೈಸೂರು ಅಭಿಯಾನದ ಅಂಗವಾಗಿ ಶನಿವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು 
ಮೈಸೂರು

ಮೈಸೂರು: ಒಂದು ಗಂಟೆಯಲ್ಲಿ 600 ಕೆ.ಜಿ. ಒಣಕಸ ಸಂಗ್ರಹ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಸ್ವಚ್ಛತೆಯಲ್ಲಿ ದೇಶದಲ್ಲಿ ಅಗ್ರಸ್ಥಾನಕ್ಕೇರಿಸುವ ಸಂಕಲ್ಪದೊಂದಿಗೆ ನಗರ ಪಾಲಿಕೆಯು ಹಮ್ಮಿಕೊಂಡಿ ರುವ ‘ಸ್ವಚ್ಛ ಮೈಸೂರು’ ಅಭಿಯಾನದ ಭಾಗವಾಗಿ ಶನಿವಾರ ನಗರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ಶ್ರಮದಾನದಲ್ಲಿ ಫೀನಿಕ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿಯ ವಿದ್ಯಾರ್ಥಿಗಳು, ಜೆಎಸ್‌ಎಸ್ ಕಾಲೇಜಿನ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬೃಹತ್ ಕಾರ್ಯಾಚರಣೆಯ ಸಮಯದಲ್ಲಿ 600 ಕೆ.ಜಿ.ಯಷ್ಟು ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ಬಹುಮಾನ ವಿತರಣೆ: ಅಭಿಯಾನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ವಯಂಸೇವಕರು ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡರೆ, ಫೀನಿಕ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿ ದ್ವಿತೀಯ ಬಹುಮಾ ಪಡೆಯಿತು. ಜೆಎಸ್‌ಎಸ್ ತೃತೀಯ ಬಹುಮಾನ ಪಡೆದುಕೊಂಡಿತು.
ಸಮುದಾಯ ಸಂಘಟಕರು ಮತ್ತು ನಾಗರಿಕರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮೈಸೂರನ್ನು ಪ್ಲಾಸ್ಟಿಕ್‌ಮುಕ್ತ ಮತ್ತು ಸ್ವಚ್ಛ ನಗರವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದರು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸಮೀರ್ ಪ್ರಕಾಶ್ ಕೋಡೆ, ವಲಯಾಯುಕ್ತ ಎ.ರಮೇಶ್, ಸ್ವಚ್ಛ ಭಾರತ ಅಭಿಯಾನದ ನೋಡಲ್ ಅಧಿಕಾರಿ ಕೆ.ಎಸ್. ಮೃತ್ಯುಂಜಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೀನಾಕ್ಷಿ ಹಾಗೂ ಇತರರು ಇದ್ದರು.