ಸರಗೂರು ಸಮೀಪದ ಹುಲಿಕುರ ಗ್ರಾಮದಲ್ಲಿ ಶನಿವಾರ ಶ್ರೀವೇಣಗೋಪಾಲಸ್ವಾಮಿ ಜಾಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು: ಸಮೀಪದ ಹುಲಿಕುರ ಗ್ರಾಮದಲ್ಲಿ ಶನಿವಾರ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ದೇವರ ಕೃಪಗೆ ಪಾತ್ರರಾದರು.
ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನವನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆಗಳ ಮೆರವಣಿಗೆ ನಡೆಸಲಾಯಿತು. ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಿ ಬಂತು. ಈ ವೇಳೆ ಭಕ್ತರು ಹಣ್ಣು, ದವನ ಎಸೆದು ಹರಕೆ ತೀರಿಸಿದರು. ಜಾತ್ರೆ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸರತಿಯಲ್ಲಿ ಸಾಗಿ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಗೋವಿಂದ.. ಗೋವಿಂದ..ನಾಮ ಪಠಿಸುತ್ತಾ ದಾಸರು, ಗುಡ್ಡರು, ದೊಣ್ಣೆ ವರಸೆ ಹಾಡಿದರು. ಇನ್ನು ಕೆಲವರು ದೇವರಿಗೆ ಹೊತ್ತ ಹರಕೆ ತಿರಿಸಿದರು. ಎಚ್. ಡಿ.ಕೋಟೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ದೇವಸ್ಥಾನದ ಪ್ರಧಾನ ಆರ್ಚಕ ವೇಣುಗೋಪಾಲ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ.ಸ್ವಾಮಿ, ಕಾರ್ಯದರ್ಶಿ ಎಚ್.ಪಿ.ಬಾಲಕೃಷ್ಣ, ಖಜಾಂಚಿ ಕೆ.ಮೋಹನ್‌ರಾಜ್, ಗೌರವಾಧ್ಯಕ್ಷ ಚಿಕ್ಕವೀರನಾಯಕ, ನಿರ್ದೇಶಕರಾದ ವೇಣುಗೋಪಾಲ್, ಎಚ್.ಎಲ್.ನಂಜೇಗೌಡ, ಕೆ.ಗೋಪಾಲ್, ಬಿ.ಸಿ.ಬಸಪ್ಪ, ರವಿಕುಮಾರ್, ಚನ್ನನಾಯಕ, ಸುರೇಂದ್ರ, ರವಿ ಚಿಕ್ಕದೇವನಾಯಕ, ನವನೀತ್, ನಿರಂಜನ್‌ರಾಜ್ ಅರಸ್, ಗೋವಿಂದೇಗೌಡ, ರವಿಕುಮಾರ್, ಶ್ರೀನಿವಾಸ್, ಅಭಿಕುಮಾರ್, ಬಾಲಕೃಷ್ಣ, ಗೋಪಾಲಯ್ಯ, ಗೋವಿಂದನಾಯಕ ಸೇರಿದಂತೆ ಹುಲಿಕುರ ಅಕ್ಕ, ಪಕ್ಕದ ಗ್ರಾಮದ ಭಕ್ತಾದಿಗಳು ಹಾಜರಿದ್ದರು.
ಆರೋಗ್ಯ ಕೇಂದ್ರ: ಜಾತ್ರೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ನೇತೃತ್ವದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ತಪಾಸಣೆ ಕೇಂದ್ರ ತೆರೆಯಲಾಗಿತ್ತು.