ಬೆಟ್ಟದಪುರದಲ್ಲಿ ಮಂಗಳವಾರ ಭ್ರಮರಾಂಬ ಸಮೇತ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಮಂಗಳವಾರ ಭ್ರಮರಾಂಬ ಸಮೇತ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮ ಮತ್ತು ಬೆಟ್ಟದ ಮೇಲಿನ ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದ ವಿಶೇಷ ಪೂಜೆ ನೆರವೇರಿತು. ಮೂರು ರಥಗಳಿಗೂ ವಿವಿಧ ಪುಷ್ಪಗಳು, ವಿವಿಧ ಬಗೆಯ ಬಣ್ಣಗಳ ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು. ರಥಗಳ ಮೇಲೆ ಕ್ರಮವಾಗಿ ಬೆಳ್ಳಿಬಸಪ್ಪ, ಗಣಪತಿ ಹಾಗೂ ಗಿರಿಜಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಸುತ್ತ ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಸಲ್ಲಿದ ಶುಭಗಳಿಗೆಯಲ್ಲಿ ಗಣ್ಯರು ಹಾಗೂ ಭಕ್ತಾದಿಗಳು ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು.
ವಿವಿಧೆಡೆಯಿಂದ ಆಗಮಿಸಿದ ಭಕ್ತರೆಲ್ಲ ಮೊದಲು ಬೆಳ್ಳಿ ಬಸಪ್ಪ, ನಂತರ ಗಣಪತಿ ಮತ್ತು ಕೊನೆಯಲ್ಲಿ ಗಿರಿಜಮ್ಮ ಮಲ್ಲಯ್ಯ ರಥಗಳನ್ನು ಒಂದೊಂದಾಗಿ ಉಘೇ ಮಲ್ಲಯ್ಯ, ಉಘೇ ಗಿರಿಜಾಮ್ಮ, ಉಘೇ ಮಲ್ಲಿಕಾರ್ಜುನ ಜೈಕಾರದೊಂದಿಗೆ ಎಳೆದು ಭಕ್ತಿ ಸಮರ್ಪಿಸಿದರು. ನವದಂತಿಗಳು, ಭಕ್ತರು ತೇರುಗಳಿಗೆ ಹಣ್ಣು-ದವನ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.
ದೈವನಾಡಿನ ದೇಗುಲಗಳಲ್ಲಿ ಪೂಜೆ: ಶ್ರೀಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಉತ್ತರ ದಿಕ್ಕಿನಲ್ಲಿರುವ ಪ್ರಸಿದ್ಧ ಏಣಿ ಹನುಮಂತ(ಶ್ರೀ ವೀರಾಂಜನೇಯ ಗುಡಿ), ಗ್ರಾಮದ ಹೃದಯಭಾಗದಲ್ಲಿ ಪವಾಡ ಬಸವೇಶ್ವರ ದೇವಸ್ಥಾನ, ಶ್ರೀ ಕೊದಂಡರಾಮ ದೇವಸ್ಥಾನ ಹಾಗೂ ಶಕ್ತಿದೇವತೆ ಶ್ರೀ ಶಾಂತವೀರಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಗ್ರಾಮದ ಪ್ರಮುಖ ರಸ್ತೆ, ಬೀದಿ ಹಾಗೂ ದೇವಸ್ಥಾನಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು.
ಬೆಟ್ಟ ಹತ್ತಿಳಿದ ಭಕ್ತಾದಿಗಳು: ಸುಮಾರು 3,108 ಮೆಟ್ಟಿಲುಗಳನ್ನು ಹೊಂದಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಇತ್ತೀಚೆಗೆ ಪ್ರಮುಖ ಚಾರಣಪ್ರಿಯ ಸ್ಥಳವಾಗಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಮೂರು-ನಾಲ್ಕು ದಿನಗಳಿಂದ ಬೆಟ್ಟ ಹತ್ತುವರ ಸಂಖ್ಯೆ ಹೆಚ್ಚಾಗಿದೆ. ರಥೋತ್ಸವ ದಿನವು ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸಿದೆ ಸಾವಿರಾರು ಮಂದಿ ಬೆಟ್ಟ ಹತ್ತಿ ಮೇಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು. ಭಕ್ತರು ಮಾತ್ರವಲ್ಲದೆ, ಯುವಕ- ಯುವತಿಯರು, ಸ್ನೇಹಿತರು ಫೋಟೋ ತೆಗೆದುಕೊಂಡು ಹಾಗೂ ಹಲವರು ರೀಲ್ಸ್ ಮಾಡಿ ಸಂತಸಪಟ್ಟರು. ಬಿಸಿಲಿನ ದಾಹದ ದಣಿವು ನಿಗಿಸಲು ಮೆಟ್ಟಿಲುಗಳ ಉದ್ದಕ್ಕೂ ನೀರಿನ ಬಾಟಲ್, ಮಜ್ಜಿಗೆ ಮತ್ತು ಜ್ಯೂಸ್ ಮಾರಾಟ ಮಾಡುವ ಸಣ್ಣಪುಟ್ಟ ಅಂಗಡಿಗಳು ವ್ಯಾಪಾರ ನಡೆಸಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದಪುರ ಠಾಣೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.