ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಫೆ.13ರಂದು ಆಯೋಜಿಸಿರುವ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಆದಿವಾಸಿ ಮುಖಂಡರು ಪಾಲ್ಗೊಂಡಿದ್ದರು. ಮುಖಂಡರಾದ ವಿಠಲ್ ನಾಣಾಚ್ಚಿ, ಜಯಪ್ಪ, ಮಾಸ್ತಮ್ಮ, ಲಕ್ಷ್ಮೀ ಇತರರಿದ್ದರು.
ಹುಣಸೂರು : ಸಂಘಟನಾತ್ಮಕ ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕು ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಅಭಿಪ್ರಾಯಪಟ್ಟರು.
ಫೆ.13ರಂದು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜನೆಗೊಂಡಿರುವ 6ನೇ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ದಿಶೆಯಲ್ಲಿ ವಿವಿಧ ಮಟ್ಟದ ಅರಣ್ಯ ಹಕ್ಕು ಸಮಿತಿಗಳನ್ನು ಪರಿಷ್ಕರಿಸಿ ಬಲಗೊಳಿಸಿ ಕಾರ್ಯ ನಿರ್ವಹಿಸಬೇಕಿದೆ. ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಒತ್ತಾಯಿಸುವುದು ನಮ್ಮ ಹೋರಾಟದ ಪ್ರಮುಖ ಬೇಡಿಕೆಯಾಗಿದೆ. ಆದಿವಾಸಿ ಕೃಷಿ ಭೂಮಿಗೆ ಕಂದಾಯ ದಾಖಲೆ ನೀಡುವುದು, ಸ್ವಾಧೀನದಲ್ಲಿರುವ ಭೂಮಿಗೆ ಹಕ್ಕುಪತ್ರ ನೀಡಲು ಆಗ್ರಹಿಸುವುದು, ಸೌಹಾರ್ದ ಸಂಘಗಳನ್ನು ಬಲ ಪಡಿಸುವುದು ಮುಂತಾದ ಜ್ವಲಂತ ಸಮಸ್ಯೆಗಳಿಗೆ ಒಗ್ಗಟ್ಟಿನ ಹೋರಾಟ ನಡೆಸಿದಲ್ಲಿ ಮಾತ್ರ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದರು.
ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ ಮಾತನಾಡಿ, ಬೇರೆ ಸಮುದಾಯದವರು ಜೇನುಕುರುಬರ ಜಾತಿ ಪತ್ರ ಪಡೆದು ದುರುಪಯೋಗ ಮಾಡುತ್ತಿರುವುದನ್ನು ತಡೆಗಟ್ಟುವುದು, ಪೆಸಾ ಕಾಯ್ದೆ ಜಾರಿಗೆ 5ನೇ ಅನುಸೂಚಿತ ಪ್ರದೇಶದಡಿ ಆದಿವಾಸಿ ಹಾಡಿಗಳನ್ನು, ಅವರ ಅರಣ್ಯಗಳನ್ನು ಘೋಸಿಸಲು ಆಗ್ರಹಿಸುವುದು, ಸರ್ಕಾರಿ ಶಾಲೆಗಳಲ್ಲಿ, ಆಶ್ರಮ ಶಾಖೆಗಳಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಒತ್ತಾಯಿಸುವುದು, ಯುವಜನರ ಕೌಶಲ ತರಬೇತಿಗೆ ಆಗ್ರಹಿಸುವುದು, ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ 3,418 ಕುಟುಂಬಗಳಿಗೆ ಪುನರ್ವಸತಿಗೆ ಆಗ್ರಹಿಸುವುದು, ಒಳ ಮೀಸಲಿಗೆ ಆಗ್ರಹಿಸುವುದು ಸೇರಿದಂತೆ ಆದಿವಾಸಿಗಳನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಒಗ್ಗಟ್ಟಿನ ಹೋರಾಟ ಅಗತ್ಯ. ಪ್ರತಿ ಹಂತದ ಸಂಘಟನೆಯಲ್ಲೂ ಯುವ ಸಮುದಾಯಗಳು ಕೈಜೋಡಿಸಿದಲ್ಲಿ ಮಾತ್ರ ಹೋರಾಟಕ್ಕೆ ಅರ್ಥ ಸಿಗಲು ಸಾಧ್ಯ ಎಂದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ ಮಾತನಾಡಿ, ಫೆ.13ರಂದು ಆಯೋಜನೆಗೊಂಡಿರುವ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಶಿವಕುಮಾರ್, ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಭಾಗವಹಿಸಲಿದ್ದಾರೆ. ಪಾರ್ಲಿಮೆಂಟ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ರಾಜ್ಯದ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ, ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ಅಧ್ಯಕ್ಷ ಕುಟ್ಟವಾಡಿ ಶಿವಣ್ಣ, ನಾಟಿವೈದ್ಯೆ ಮಾಸ್ತಮ್ಮ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಭರತವಾಡಿ ಲಕ್ಷ್ಮೀ, ಡೀಡ್ ಪ್ರಕಾಶ್, ಶಾರದಾ ಒಳಗೆರೆ ಇತರರು ಇದ್ದರು.