ಹೆಡತಲೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಬೆಳ್ಳೇಗೌಡ ನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮಹದೇವ ನಾಯಕ, ಸಂಪತ್ತು, ಕೃಷ್ಣನಾಯಕ ಇತರರು ಇದ್ದರು. 
ಮೈಸೂರು

ಹೆಡತಲೆ ನಿವೃತ್ತ ಮುಖ್ಯಶಿಕ್ಷಕರಿಗೆ ಬೀಳ್ಕೊಡುಗೆ

ಲೋಕೇಶ್ ಮನು. ಡಿ
ನಂಜನಗೂಡು: ತಾಲೂಕಿನ ಹೆಡತಲೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬೆಳ್ಳೇಗೌಡ ನಿವೃತ್ತಿ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಅವರನ್ನು ಬೀಳ್ಕೊಡಲಾಯಿತು.
ಗ್ರಾಮದ ಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಮಹದೇವ ನಾಯಕ ಮಾತನಾಡಿ, ಶಾಲೆಗೆ ಉತ್ತಮ ಕೆಲಸ ಮಾಡಲು ಗ್ರಾಮಸ್ಥರ ಸಹಕಾರವನ್ನು ಮೊದಲು ಕೇಳುತ್ತಿದ್ದರು. ಗ್ರಾಮದಲ್ಲಿ ತಾವು ಸಹ ಒಬ್ಬರೆಂದು ಭಾವಿಸಿಕೊಂಡು ಶಾಲೆಯ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದ್ದರು. ಶಾಲೆಯ ಶಿಕ್ಷಕ ವೃಂದದವರನ್ನು ಒಂದು ಕುಟುಂಬದಂತೆ ನೋಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ಪ್ರೇರೇಪಿಸುತ್ತಿದ್ದರು ಎಂದು ಹೇಳಿದರು.
ಯುವ ಮುಖಂಡ ಮಾದೇಶ್ ಮಾತನಾಡಿ, ಶಾಲೆಗೆ ಹೆಚ್ಚಿನ ಮಹತ್ವ ನೀಡಿ, ಅತ್ಯುತ್ತಮ ಶಾಲಾ ಪ್ರಶಸ್ತಿ ಹಾಗೂ ಅತ್ಯುತ್ತಮ ಮುಖ್ಯಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ನಮ್ಮ ಶಾಲೆ ಹೆಸರು ಗಳಿಸಲು ಬೆಳ್ಳೇಗೌಡರು ಪ್ರಮುಖರು. ಶಾಂತ ಸ್ವಭಾವದ ಇಂತಹ ಶಿಕ್ಷಕರ ಆದರ್ಶಗಳನ್ನು ಪಾಲಿಸಿದರೆ ಎಲ್ಲ ಶಾಲೆಗಳು ಉನ್ನತ ಮಟ್ಟಕ್ಕೆ ತಲುಪುತ್ತವೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಬೆಳ್ಳೇಗೌಡರನ್ನು ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಗೌರವಿಸಿದರು.
ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮಹದೇವ ನಾಯಕ, ಸಂಪತ್ತು, ಕೃಷ್ಣನಾಯಕ, ಗ್ರಾಮ ಪಂಚಾಯಿತಿ ಸದಸ್ಯ ರಾಜು, ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಹಾಗೂ ಶಿಕ್ಷಕರು ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಇದ್ದರು.