ಹಲಗನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಉದಯ್‌ಕುಮಾರ್ ಉದ್ಘಾಟಿಸಿದರು. ಪ್ರಸಾದ್, ಬಿ.ಕೆ.ರವೀಂದ್ರ, ಹಲಗನಹಳ್ಳಿ ಶಾಖೆಯ ಸಕೆ.ಬಿ.ನಾಗೇಶ್, ಬಿ.ಎಸ್.ಸುನೀಲ್ ಕುಮಾರ್ ಇದ್ದರು. 
ಮೈಸೂರು

ಬ್ಯಾಂಕಿಂಗ್ ಸೇವೆಗಳು ಸದುಪಯೋಗವಾಗಲಿ

ಲೋಕೇಶ್ ಮನು. ಡಿ
ಬೆಟ್ಟದಪುರ: ಗ್ರಾಮೀಣ ಜನತೆಗೆ ಉತ್ತಮ ಸೇವೆ ನೀಡುತ್ತಿರುವ ಗ್ರಾಮೀಣ ಬ್ಯಾಂಕ್‌ನ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್, ಮಡಿಕೇರಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಉದಯ್‌ಕುಮಾರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರ ಆರ್ಥಿಕ ಪ್ರಗತಿ ದೃಷ್ಟಿಯಿಂದ ಬ್ಯಾಂಕ್‌ಗಳು ಕೆಲಸ ನಿರ್ವಹಿಸುತ್ತಿವೆ. ಜನರು ಆರ್ಥಿಕ ಪ್ರಗತಿ ಸಾಧಿಸಿದರೆ ಬ್ಯಾಂಕೂ ಅಭಿವೃದ್ಧಿ ಹೊಂದುತ್ತದೆ. ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ಕೊಡಲು ಬ್ಯಾಂಕ್ ಬದ್ಧವಾಗಿದೆ. ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಪರಸ್ಪರ ನಂಬಿಕೆ ಮುಖ್ಯವಾದದ್ದು, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.
ಬ್ಯಾಂಕ್‌ನಿಂದ ಲಭಿಸುವ ಸಾಲ, ವಿಮೆ ಸೇರಿದಂತೆ ಇತರ ಸೌಲಭ್ಯ ಅನುಕೂಲಕರವಾಗಿವೆ. 436 ರೂ. ಮತ್ತು 20 ರೂ. ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂಬ ಕಡಿಮೆ ಮೊತ್ತದ ವಿಮೆಗೆ ನೋಂದಣಿ ಮಾಡಿಸಿಕೊಳ್ಳವ ಮೂಲಕ ನಾಲ್ಕು ಲಕ್ಷ ರೂ. ಮೊತ್ತದ ವಿಮೆ ಸೌಲಭ್ಯ ಸಿಗಲಿದೆ. ಪಿಂಚಣಿ ಸೇರಿದಂತೆ ಅನೇಕ ಯೋಜನೆಗಳಿದ್ದು, ಹೆಚ್ಚಿನ ಮಾಹಿತಿಗೆ ಬ್ಯಾಂಕಿಗೆ ಭೇಟಿ ನೀಡಬಹುದು ಎಂದರು.
ಬ್ಯಾಂಕ್‌ನ ಸೆಕ್ಯೂರಿಟಿ ಸೆಲ್ ಅಧಿಕಾರಿ ಪ್ರಸಾದ್, ಪಿರಿಯಾಪಟ್ಟಣ ಶಾಖೆಯ ಹಿರಿಯ ವ್ಯವಸ್ಥಾಪಕ ಬಿ.ಕೆ ರವೀಂದ್ರ, ಹಲಗನಹಳ್ಳಿ ಶಾಖೆಯ ವ್ಯವಸ್ಥಾಪಕ ಕೆ.ಬಿ.ನಾಗೇಶ್, ಬೆಟ್ಟದಪುರ ಶಾಖೆಯ ವ್ಯವಸ್ಥಾಪಕ ಬಿ.ಎಸ್.ಸುನೀಲ್ ಕುಮಾರ್, ಅಧಿಕಾರಿಗಳಾದ ನವೀನ್, ಪುರುಷೋತ್ತಮ್, ಸಿಬ್ಬಂದಿ ಸಾಯಿ ಕಿರಣ್, ರಾಜಣ್ಣ, ನಾರಾಯಣ, ಗೋಪಾಲ್, ನವೀನ್, ಮುಖಂಡರಾದ ಸುಯಲ್ ಪಾಷಾ, ಶೇಕಿಲ್ ಪಾಷಾ, ನಜರ್ ಪಾಷಾ, ಅಬ್ದುಲ್ ಜಾವೀದ್, ಅಸ್ಲಾಂ ಪಾಷಾ, ನಾರಾಯಣಗೌಡ, ಕರೀಗೌಡ, ನಾಗೇಶ್, ಶಂಕರ್ ಇದ್ದರು.