ಹುಣಸೂರು ರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ವನವಮಿ ಅಂಗವಾಗಿ ಶ್ರೀ ಮಧ್ವಾಚಾರ್ಯರ ರಥೋತ್ಸವ ನೆರವೇರಿತು.
ಹುಣಸೂರು : ನಗರದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ವನವಮಿ ಅಂಗವಾಗಿ ಮಧ್ವಾಚಾರ್ಯರ ರಥೋತ್ಸವವನ್ನು ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಮಂಗಳವಾರ ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಮಠದ ಪ್ರಧಾನ ಅರ್ಚಕ ನಾರಾಯಣಮೂರ್ತಿ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣೆ, ದೇವರನಾಮದೊಂದಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆ ನಡೆಸಿದರು. 11 ಗಂಟೆಗೆ ವಿದ್ವಾನ್ ಪದ್ಮನಾಭ ವರಕೇಡಿ ಆಚಾರ್ಯರಿಂದ ಪ್ರವಚನ ನಡೆಸಲಾಯಿತು. ಮಧ್ಯಾಹ್ನ 11.30ಕ್ಕೆ ಅಲಂಕೃತ ರಥದಲ್ಲಿ ಮಧ್ವಾಚಾರ್ಯರ ಭಾವಚಿತ್ರವನ್ನಿಟ್ಟು ಮಠದ ಪ್ರಾಂಗಣದಲ್ಲಿ ರಥೋತ್ಸವ ನಡೆಸಿ ಭಕ್ತರು ಸಂಭ್ರಮಿಸಿದರು.
ಮಧ್ಯಾಹ್ನ ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು. ಚಂದನ್ ಮತ್ತು ಸಂಗಡಿಗರು ದೇವರನಾಮ, ಕೀರ್ತನೆಗಳನ್ನು ಹಾಡಿದರು.
ಮಠದ ಅಧ್ಯಕ್ಷ ಭಾಸ್ಕರ್ ಭಟ್, ಉಪಾಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಸತೀಶ್, ಸಮಿತಿಯ ಸಂಪತ್‌ಕುಮಾರ್, ಮುಖಂಡರಾದ ಸುಬ್ಬಣ್ಣಗೋಳಿ, ಎಚ್.ಆರ್.ಗುರುರಾಜ್, ಶ್ರೀಹರಿ, ಗುರುಪ್ರಸಾದ್, ಇಂದಿರಾ, ಗೀತಾ, ಲಕ್ಷ್ಮೀ, ಸುಶೀಲಾ, ಸತ್ಯನಾರಾಯಣ, ಮಧ್ವಭಕ್ತರು ಇದ್ದರು.