ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ ಆಡಳಿತ ಮಂಡಳಿಗೆ ಅಭಿನಂದನಾ ಸಮಾರಂಭದಲ್ಲಿ ಸದಸ್ಯರಿಗೆ ಸನ್ಮಾನಿಸಲಾಯಿತು. ಅಂಬಿಕಾ ಶ್ರೀಧರ್, ಮಣಿಮಹದೇವ್, ಡಿ.ಕೆ.ನಟೇಶ್ ಇತರರು ಇದ್ದರು. 
ಮೈಸೂರು

ಸದಸ್ಯರು, ಜನರ ಸಹಕಾರದಿಂದ ಗಾಂಧಿ ಪುರಸ್ಕಾರ

ಲೋಕೇಶ್ ಮನು. ಡಿ
ಬೆಟ್ಟದಪುರ: ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ವ್ಯಾಪ್ತಿಯ ಗ್ರಾಮಸ್ಥರ ಸಹಕಾರದಿಂದ ಗಾಂಧಿ ಪುರಸ್ಕಾರ ಲಭಿಸಿದೆ ಎಂದು ಕಣಗಾಲು ಗ್ರಾಪಂ ಪಿಡಿಒ ಕೆ.ಗಣೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಆಡಳಿತ ಮಂಡಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಐದು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ನರೇಗಾ ಯೋಜನೆಯಡಿ ಸುಮಾರು 25 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಸುಮಾರು 500 ಫಲನುಭವಿಗಳಿಗೆ ವಿವಿಧ ರೀತಿಯ ಯೋಜನೆಯಡಿ ಅನುದಾನ ಕಲ್ಪಿಸಿದೆ. ಐದು ವರ್ಷಗಳಲ್ಲಿ ತಾಲೂಕಿನಲ್ಲಿ ಅತ್ಯಧಿಕಾ ಮಾನವ ದಿನಗಳ ಸೃಜನೆ ಮಾಡಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯಿತಿಯಿಂದ ಪುರಸ್ಕಾರ ಕೂಡ ಪಡೆದುಕೊಳ್ಳಲಾಗಿದೆ. ಹಲವು ಅಭಿವೃದ್ಧಿ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ಅತೀ ಹೆಚ್ಚು ಮೂಲಸೌಕರ್ಯ ಒದಗಿಸಲಾಗಿದೆ. 2023-24ನೇ ಸಾಲಿನಲ್ಲಿ ನಮ್ಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಪ್ರಶಸ್ತಿ ಲಭಿಸಿತ್ತು.
ಪಂಚಾಯಿತಿಯಿಂದ ಬರುವ ಎಲ್ಲ ಸೌಲಭ್ಯವನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಕೆಲಸ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಶೀಧರ್ ಮಾತನಾಡಿದರು. ಐದು ವರ್ಷ ಸೇವೆ ಸಲ್ಲಿಸಿ ಆಡಳಿತ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ಸದಸ್ಯರನ್ನು ಪಂಚಾಯಿತಿ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸದಸ್ಯರಾದ ಡಿ.ಕೆ ನಟೇಶ್, ಎಂ.ಟಿ.ಹನುಮಂತು, ಕುಮಾರಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಶ್ರೀಧರ್, ಉಪಾಧ್ಯಕ್ಷೆ ಮಣಿಮಹದೇವ್, ಸದಸ್ಯರಾದ ಡಿ.ಕೆ.ನಟೇಶ್, ಎಂ.ಟಿ.ಹನುಮಂತು, ಚಂದ್ರಮ್ಮ, ಮೈಮುನಿಸಾ, ಕುಮಾರಶೆಟ್ಟಿ, ಆನಂದ, ರವಿ, ಚಂದ್ರಶೇಖರ್, ರತಿ, ತ್ಯಾಗರಾಜು, ರೇಣುಕಮ್ಮ, ಸಾಕಮ್ಮ, ಸಿಬ್ಬಂದಿ ಪಾಂಡು, ವಿಶ್ವನಾಥ್, ಸೋಮಶೇಖರ್, ಜಯಂತ್ ಶೆಟ್ಟಿ ಹಾಗೂ ಸಿಬ್ಬಂದಿ ಇತರರು ಇದ್ದರು.