ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಎಚ್.ಕೆ.ಕೃಷ್ಣಯ್ಯ, ಡಿ.ಶ್ರೀನಿವಾಸ್, ಸುನೀತಾ ರಮೇಶ್, ಚಂದ್ರಕುಮಾರ್ ಇತರರು ಇದ್ದರು. 
ಮೈಸೂರು

ಪಠೇತ್ತರ ಚಟುವಟಿಕೆಯಲ್ಲೂ ಸಾಧನೆ ಮಾಡಿ

ಲೋಕೇಶ್ ಮನು. ಡಿ
ಕೆ.ಆರ್.ನಗರ :ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ.ಡಿ.ರವಿಶಂಕರ್ ಕಿವಿಮಾತು ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 2025-26 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿಗೆ ಶೌಚಗೃಹ, ಐದು ಕೊಠಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅತಿ ಶೀಘ್ರದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಿಕೊಡಲಾಗುವುದು, ಅಲ್ಲದೆ ಕಾಲೇಜು ಆವರಣದಲ್ಲಿ ಎಲ್ಲ ಕಾಲೇಜುಗಳು ಒಳಗೊಂಡಂತೆ ಬೃಹತ್ ವೇದಿಕೆಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿ ಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಕಳೆದ ಸಾಲಿನಲ್ಲಿ 600ಕ್ಕೆ 599 ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ 1 ಲಕ್ಷ ಬಹುಮಾನ ಘೋಷಣೆ ಮಾಡಿದ್ದೆ, ಆದರೆ ಯಾವ ವಿದ್ಯಾರ್ಥಿಗಳು ಆ ಅಂಕ ಗಳಿಸಲಲಿಲ್ಲ.ಈ ಸಾಲಿನಲ್ಲದರೂ 600ಕ್ಕೆ 599 ಅಂಕಗಳನ್ನು ಪಡೆದು ಕೊಂಡು ವಿದ್ಯಾರ್ಥಿಗಳು ಕಾಲೇಜು ಮತ್ತು ತಾಲೂಕಿನ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ ಮಾತನಾಡಿ, ಕಾಲೇಜಿನಲ್ಲಿ 1,500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನ ಆವರಣದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಿ ಕೊಡಬೇಕಾಗಿ ಮನವಿ ಮಾಡಿದರಲ್ಲದೆ, ನಮ್ಮ ಕಾಲೇಜು ಶೇ. 100 ಫಲಿತಾಂಶ ಬರುತ್ತಿದೆ. ಇದನ್ನೆಲ್ಲ ಮನಗಂಡು ಪಾಲಕರು ಸರ್ಕಾರಿ ಕಾಲೇಜಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ ಎಂದರು.
ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಡಿ.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಕ್ಷೇತ್ರದ ಉನ್ನತಿಗಾಗಿ ಪಾಲಕರು ಹಾಗೂ ಶಿಕ್ಷಕರು ಸಹಕರಿಸಬೇಕು. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ತಮ್ಮ ಪಾತ್ರವನ್ನು ಪ್ರಾಮಾಣಿಕ, ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಶಿಕ್ಷಣ ಕ್ಷೇತ್ರ ಬೆಳವಣಿಯಾಗುತ್ತದೆ ಎಂದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಬಾಲಕಿಯರಿಗೆ ಬಹುಮಾನ ವಿತರಿಸಲಾಯಿತು. ಅರ್ಥಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಶಾಸಕ ಡಿ.ರವಿಶಂಕರ್, ರಾಜ್ಯ ಪ್ರಶಸ್ತಿ ವಿಜೇತ ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ ಹಾಗೂ ಸುಮಾರು 45 ಮಂದಿ ಬೋಧಕ ಮತ್ತು ಬೋಧಕೇತರ ನಿಬ್ಬಂದಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ ರಮೇಶ್, ಉಪನ್ಯಾಸಕರಾದ ಚಂದ್ರಕುಮಾರ್, ಗುರುರಾಜ್, ಕೃಷ್ಣ, ಸುರುಚಿ, ಪುಣ್ಯಶ್ರೀ, ದಾಕ್ಷಾಯಿಣಿ, ಕೆ.ಮಂಜೇಶ್, ಜಗದೀಶ್, ರೇಖಾ, ವಿದ್ಯಾ, ಎನ್.ಶೋಭಾ, ಕುಮಾರ್, ಭರತ್, ಸುಧೀಂದ್ರ, ಶಶಿಕುಮಾರ್, ಅತಿಥಿ ಉಪನ್ಯಾಸಕರಾದ ಶರತ್, ವಿವೇಕ್, ಮೇಘಾ, ಆರ್.ಭಾಗ್ಯಾ, ಸಮಾಜ ಸೇವಕಿ ರೇಖಾ ಶ್ರೀನಿವಾಸ್, ಸಿಬ್ಬಂದಿ ಮಹೇಶ್, ರವಿ, ಶಶಿಕುಮಾರ್ ಇತರರು ಇದ್ದರು.