ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿ ಸಂಬಂಧ ನಂಜನಗೂಡು ತಾಲೂಕು ಸಿಐಟಿಯು ಆಯೋಜಿಸಿದ್ದ ಸಭೆಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ಮಾತನಾಡಿದರು. ಎಚ್.ಎಸ್. ಸುನಂದಾ, ಎಂ.ಕೆ.ಬಾಲಾಜಿ ರಾವ್ ಇತರರು ಇದರು.  
ಮೈಸೂರು

ಕೇಂದ್ರದಿಂದ ಕಾರ್ಮಿಕರ ವಿರೋಧಿ ನಡೆ

ಲೋಕೇಶ್ ಮನು. ಡಿ
ನಂಜನಗೂಡು: ಬಂಡವಾಳಗಾರರ ಲಾಭವನ್ನು ಹೆಚ್ಚು ಮಾಡುವುದಕ್ಕೆ ಹಾಗೂ ಅವರ ಸಂಪತ್ತನ್ನು ರಕ್ಷಣೆ ಮಾಡುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೆ ತರುತ್ತಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಹಾಗೂ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಸ್. ವರಲಕ್ಷ್ಮೀ ದೂರಿದರು.
ಫೆ.12ರಂದು ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟ್ರ ವ್ಯಾಪಿ ಕರೆಕೊಟ್ಟಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿ ಸಂಬಂಧ ನಂಜನಗೂಡು ತಾಲೂಕು ಸಿಐಟಿಯು ಆಯೋಜಿಸಿದ್ದ ಕಾರ್ಮಿಕರು, ರೈತರು, ದಲಿತ ಸಂಘಟನೆ, ಮಹಿಳಾ ಸಂಘಟನೆ, ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರವು ಸುಮಾರು ಐದು ವರ್ಷಗಳಿಂದ ಬಾಕಿ ಉಳಿದಿದ್ದ ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆಗಳನ್ನು ಜಾರಿಗೆ ತಂದು ಕಾರ್ಮಿಕರ ಪರವಾಗಿದ್ದ ಹಳೆಯ 29 ಕಾನೂನುಗಳನ್ನು ಬದಲಿಸಿದೆ. ಈ ಸಂಹಿತೆಗಳು ಕಾರ್ಮಿಕ ವಿರೋಧಿ ಆಗಿದ್ದು, ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ. ಈ ದೇಶದ ಕಾರ್ಮಿಕರು, ರೈತರ ಪ್ರತಿರೋಧಕ್ಕೆ ಹೆದರಿ ಇದೂವರೆಗೆ ಈ ಕಾಯ್ದೆಗಳನ್ನು ಜಾರಿಗೆ ತಂದಿರಲಿಲ್ಲ. ಆದರೆ ಈಗ ಇವುಗಳನ್ನು ಜಾರಿಗೆ ತಂದಿರುವುದರ ಬಗ್ಗೆ ಹೋರಾಟ ಮಾಡಬೇಕಿದೆ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಶ್ರೀಮಂತರ ರಕ್ಷಣೆಗಾಗಿ ಕಾರ್ಮಿಕರ ಹಕ್ಕನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲ. ಕೆಮಿಕಲ್ ಕಾರ್ಖಾನೆಗಳು, ಕಲ್ಲಿದ್ದಲು, ಗಣಿ, ವಿದ್ಯುತ್ ಇಲಾಖೆ, ಪೌರಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೆಲಸಕ್ಕೆ ಹೋದರೆ ವಾಪಸ್ ಬರುತ್ತಾರೆಂಬ ಗ್ಯಾರಂಟಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ದ್ರೋಹ ಮಾಡಿ ಶ್ರೀಮಂತರನ್ನು ರಕ್ಷಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ನಾವೆಲ್ಲ ಒಂದೇ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಆಯಾ ಕೆಲಸಕ್ಕೆ ತಕ್ಕಂತೆ ವೇತನ ನಿಗದಿ ಪಡಿಸುವುದರ ಜತೆಗೆ ಅಸಂಘಟಿತ ಕಾರ್ಮಿಕರು ಹಾಗೂ ಅಂಗನವಾಡಿ, ಬಿಸಿಯೂಟದವರು ಸೇರಿದಂತೆ ಇತರ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ಯಾಕೆ ಜಾರಿಗೆ ತರುತ್ತಿಲ್ಲ? ನರೇಗಾ ಯೋಜನೆ ಮರುಸ್ಥಾಪಿಸಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಬೀಜ ಮಸೂದೆ ಕಾಯ್ದೆ ರದ್ದು ಮಾಡಬೇಕು. ಸಾರ್ವಜನಿಕ ಸಂಸ್ಥೆ ಹಾಗೂ ಹಣಕಾಸು ಸಂಸ್ಥೆಗಳು ಖಾಸಗೀಕರಣವಾಗಬಾರದು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿಎಂ.ಕೆ.ಬಾಲಾಜಿ ರಾವ್, ಕಾರ್ಯಾಧ್ಯಕ್ಷ ಎಚ್.ಎಸ್. ಜಗದೀಶ್ ಮಾತನಾಡಿದರು. ಸಿಐಟಿಯು ನಂಜನಗೂಡು ತಾಲೂಕು ಪ್ರಧಾನ ಕಾರ್ಯದರ್ಶಿ ಧನಂಜಯ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆಯರಾದ ಲೀಲಾವತಿ, ಕಮಲಾಕ್ಷಿ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಚಂದ್ರಿಕಾ, ಹೇಮಾವತಿ ಇತರರು ಇದ್ದರು.