ಬೆಟ್ಟದಪುರ ಸಮೀಪದ ದೊಡ್ಡನೇರಳೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರು ಎಲ್‌ಇಡಿ ಟಿವಿ ಕೊಡುಗೆ ನೀಡಿದರು.
ಬೆಟ್ಟದಪುರ: ಮಕ್ಕಳು ವಿದ್ಯೆಯನ್ನು ಕಷ್ಟಪಟ್ಟು ಕಲಿಯದೆ ಇಷ್ಟಪಟ್ಟು ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ಜತೆಗೆ ತಾವು ವಿದ್ಯೆ ಕಲಿತ ಶಾಲೆ ಮತ್ತು ಶಿಕ್ಷಕರಿಗೆ ಗೌರವ ತರಬೇಕು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ದೊಡ್ಡನೇರಳೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶನಿವಾರ ವೈಯಕ್ತಿಕವಾಗಿ ಎಲ್‌ಇಡಿ ಟಿವಿ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯ. ಇಲ್ಲದಿದ್ದರೆ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಗಗನ ಕುಸುಮವಾಗಲಿವೆ. ಖಾಸಗೀಕರಣ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ. ಸರ್ಕಾರ, ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ಜಾಗೃತಿ ವಹಿಸಿದರೆ ಸರ್ಕಾರಿ ಶಾಲೆ ಉಳಿಸಬಹುದು. ಖಾಸಗಿ ಶಾಲೆಗೆ ಹೋಲಿಕೆ ಮಾಡಿದರೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಬೋಧಕರು ಇದ್ದಾರೆ. ಹಾಗಾಗಿ ಸರ್ಕಾರಿ ಶಾಲೆಯನ್ನು ಉಳಿಸಲು ಪ್ರತಿಯೊಬ್ಬರ ಸಹಕಾರ ಪ್ರಮುಖ ಎಂದರು.
ಈ ಶಾಲೆಯೂ ನಮ್ಮ ಗ್ರಾಮದ ಶಾಲೆಯಾಗಿದ್ದು, ಇಲ್ಲಿ ವಿಜ್ಞಾನ ಪ್ರಯೋಗಶಾಲೆ ಅಥವಾ ಕಂಪ್ಯೂಟರ್ ತರಗತಿಗಳನ್ನು ಆರಂಭ ಮಾಡಿದರೆ ಅದಕ್ಕೆ ಬೇಕಾದ ಎಲ್ಲ ಸಹಕಾರ ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಉಪನ್ಯಾಸಕ ದರ್ಶನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಶಾಲೆಗೆ ಎಲ್‌ಇಡಿ ಟಿವಿಯನ್ನು ಕೊಡುಗೆಯಾಗಿ ವಿತರಿಸಿದರು. ಶಾಲೆ ವತಿಯಿಂದ ಗಣ್ಯರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ವಸಂತ್, ಶಿಕ್ಷಕಿ ನಿರ್ಮಲಾ, ಮುಖಂಡರಾದ ರಾಜೇಗೌಡ, ಡಿ.ಜೆ ರಮೇಶ್, ನಟೇಶ್, ವಾಸು, ರಾಜೇಗೌಡ, ಸ್ವಾಮಿಗೌಡ, ಆನಂದ್, ಗಣೇಶ್, ಅಂಗನವಾಡಿ ಕಾರ್ಯಕರ್ತೆ ಲತಾ ಸೇರಿದಂತೆ ಇತರರು ಇದ್ದರು.