ಹುಣಸೂರು ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬಸವಜಯಂತಿ ಹಾಗೂ ಮಾದಳ್ಳಿ ಮಠದ ಬಸವ ಮಹಾದ್ವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಹಂದನಹಳ್ಳಿ ಸೋಮಶೇಖರ್, ಡಾ.ವೃಷಭೇಂದ್ರಸ್ವಾಮಿ, ಪುಟ್ಟಲಿಂಗಪ್ಪ, ರಮೇಶ್‌ಕುಮಾರ್, ಭಾಗ್ಯಕುಮಾರ್ ಇತರರಿದ್ದಾರೆ. 
ಮೈಸೂರು

ನಾಳೆ ಮುಖ್ಯಮಂತ್ರಿ ಉದ್ಘಾಟನೆ -ಉಕ್ಕಿನಕಂತೆ ಮಠದದ ಬಸವ ಮಹಾದ್ವಾರ

ಹುಣಸೂರು :
ತಾಲೂಕಿನ ಮಾದಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ನಿರ್ಮಾಣಗೊಂಡಿರುವ ಬಸವ ಮಹಾದ್ವಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.20ರಂದು ಉದ್ಘಾಟಿಸಲಿದ್ದು, ಮಠದ ಆವರಣದಲ್ಲಿ ಆಯೋಜನೆಗೊಂಡಿರುವ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾದ ತಾಲೂಕು ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ತಿಳಿಸಿದರು.
ಅಂದು ಮಧ್ಯಾಹ್ನ 3 ಗಂಟೆಗೆ ಮಠದ ಮುಂಭಾಗದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ಬಸವಮಹಾದ್ವಾರವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ನಂತರ ಶ್ರೀ ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿರುವ ಬಸವಜಯಂತಿ ಧಾರ್ಮಿಕ ಸಭೆಯಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ. ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮತ್ತು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ಮುಖ್ಯಮಂತ್ರಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವಂಕಟೇಶ್ ಭಾಗವಹಿಸಲಿದ್ದಾರೆ. ಬಸವೇಶ್ವರರ ಭಾವಚಿತ್ರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಶಾಸಕ ಜಿ.ಡಿ.ಹರೀಶ್‌ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭವ್ಯ ಮೆರವಣಿಗೆ:
ಮಹಾಸಭಾದ ಹಿರಿಯ ಮುಖಂಡ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಾ.ವೃಷಭೇಂದ್ರಸ್ವಾಮಿ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಉಕ್ಕಿನಕಂತೆ ಮಠದ ಪೀಠಾಧ್ಯಕ್ಷ ಶ್ರೀ ಸಾಂಬಸದಾಶಿವಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವೇಶ್ವರ ಪ್ರತಿಮೆಯ ಭವ್ಯ ಮೆರವಣಿಗೆಗೆ ಶ್ರೀ ನಟರಾಜಸ್ವಾಮೀಜಿ ಚಾಲನೆ ನೀಡಲಿದ್ದಾರೆ. 4-5 ಸಾವಿರ ಮಂದಿಗೆ ದಾಸೋಹ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ತಾಲೂಕು ಬಸವ ಸಮಿತಿ ಅಧ್ಯಕ್ಷ ಪುಟ್ಟಲಿಂಗಪ್ಪ, ಉಪಾಧ್ಯಕ್ಷ ಎಚ್.ಡಿ.ಗುರುಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ಭಾಗ್ಯಕುಮಾರ್, ನಿರ್ದೇಶಕ ಜೆ.ಎಸ್.ರಮೇಶ್‌ಕುಮಾರ್ ಇದ್ದರು.