ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಲ್ ಪಾಷ ಅವರ ಮೂರು ಕವನ ಸಂಕಲನಗಳನ್ನು ಮಡ್ಡೀಕೆರೆ ಗೋಪಾಲ್ ಬಿಡುಗಡೆ ಮಾಡಿದರು. ಟಿ. ಸತೀಶ್ ಜವರೇಗೌಡ, ಡಾ. ಯಲ್ಲಪ್ಪ ಕೆ.ಕೆ. ಪುರ, ಸೌಗಂಧಿಕಾ ಜೋಯಿಸ್, ಎಂ.ಬಿ. ಸಂತೋಷ್, ಆದಿಲ್ ಪಾಷ, ಅಲ್ ಹುಸ್ನ ಇದ್ದರು.
- ಕವಿ ಸಂತ ಶಿಶುನಾಳ ಶರೀಫರ ಆದಿಯಾಗಿ ಹಲವಾರು ಕವಿ, ಸಾಹಿತಿಗಳು ಕನ್ನಡದಲ್ಲಿ ಬರೆದಿದ್ದಾರೆ
- ಒಬ್ಬ ಉತ್ತಮ ಕವಿಗೆ ಜಾತಿ, ಧರ್ಮದ, ಭಾಷೆಯ ಗಡಿಗಳು ಇರುವುದಿಲ್ಲ
ಮೈಸೂರು:ಕನ್ನಡ ಸಾಹಿತ್ಯದ ಬಹುತ್ವದ ಬೇರುಗಳನ್ನು ಸುಭದ್ರಗೊಳಿಸಲು ನೆರವಾಗಿರುವ ಮುಸ್ಲಿಂ ಸಾಹಿತಿಗಳು, ನಾಡಿನ ಸರ್ವಜನಾಂಗದ ತೋಟದಲ್ಲಿ ವೈಚಾರಿಕತೆ ಮತ್ತು ಸಾಮರಸ್ಯದ ಬೀಜಗಳನ್ನು ಬಿತ್ತುತ್ತ ಬಂದಿದ್ದಾರೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಬಣ್ಣಿಸಿದರು.
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಿರಿಗನ್ನಡ ವೇದಿಕೆಯ ಮೈಸೂರು ನಗರ ಘಟಕ ಹಾಗೂ ಖುಷಿ ಪ್ರಕಾಶನದಿಂದ ಆಯೋಜಿಸಿದ್ದ ಕವಿ ಆದಿಲ್ ಪಾಷ ಅವರ ‘ನೀ ನನ್ನ ಚೈತ್ರ’, ’ಹರ್ಷೋತ್ಸವ’ ಹಾಗೂ ’ಆದಿರಾಗ’ ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕವಿ ಸಂತ ಶಿಶುನಾಳ ಶರೀಫರ ಆದಿಯಾಗಿ ಬೊಳುವಾರು ಮಹಮ್ಮದ್ ಕುಂಞ, ಕೆ.ಎಸ್.ನಿಸಾರ್‌ಅಹಮದ್, ಸಾರಾ ಅಬೂಬಕ್ಕರ್, ಭಾನು ಮುಷ್ತಾಕ್, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ.ರಜಿಯಾ, ಬಿ.ಎಂ.ಹನೀಫ್, ಆರೀಫ್ ರಾಜಾ, ಫಾತಿಮಾ ರಲಿಯಾ, ಶಿ.ಜು.ಪಾಷ ಸೇರಿದಂತೆ ಮೊದಲಾದ ಬರಹಗಾರರು ಕನ್ನಡ ಸಾಹಿತ್ಯದ ದನಿ ಮತ್ತು ಬನಿಯನ್ನು ವೃದ್ಧಿಸಿದ್ದಾರೆ ಎಂದರು.
ಅದರಲ್ಲೂ ಬಾನು ಮುಷ್ತಾಕ್ ಅವರು ಕನ್ನಡಕ್ಕೆ ಮೊಟ್ಟ ಮೊದಲಿಗೆ ಬುಕರ್ ಪ್ರಶಸ್ತಿ ತಂದುಕೊಡುವ ಮೂಲಕ ಸಾಹಿತ್ಯಕ್ಕೆ ಮತ್ತೊಮ್ಮೆ ಜಾಗತಿಕವಾಗಿ ಖ್ಯಾತಿ ತಂದುಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಾಹಿತಿಗಳ ಕೊಡುಗೆ ಅಪಾರ ಮತ್ತು ಅನನ್ಯ ಎಂದು ಹೇಳಿದರು.
ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಒಬ್ಬ ಉತ್ತಮ ಕವಿಗೆ ಜಾತಿ, ಧರ್ಮದ, ಭಾಷೆಯ ಗಡಿಗಳು ಇರುವುದಿಲ್ಲ. ಆದ್ದರಿಂದ ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು ಎಂದು ಹೇಳಿದರು.
ಇಡೀ ವಿಶ್ವ ಯುದ್ಧದ ಭಯದಲ್ಲಿದ್ದು, ಎಲ್ಲ ದೇಶಗಳು ಯುದ್ಧ ಸಾಮಗ್ರಿಗಳನ್ನು ತಯಾರು ಮಾಡಲು ಹಣ ಬಳಸುತ್ತಿದೆ. ಈ ಹಣದಲ್ಲಿ ವಿಶ್ವದ ಒಂದು ಶತಮಾನದ ಬಡ ಜನರ ಅಗತ್ಯಗಳನ್ನು ಪೂರೈಸಬಹುದು. ವಿನಾಶಕಾರಿಯಾದ ಅಣುಬಾಂಬ್‌ಗಳ ತಯಾರಿಕೆಯಿಂದ ಜೀವಕುಲ ನಾಶವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ’ನೀ ನನ್ನ ಚೈತ್ರ’ ಕವನ ಸಂಕಲನ ಕುರಿತು ಹಿರಿಯ ಕಥೆಗಾರ ಡಾ. ಯಲ್ಲಪ್ಪ ಕೆ.ಕೆ. ಪುರ, ’ಹರ್ಷೋತ್ಸವ’ ಕವನ ಸಂಕಲನ ಕುರಿತು ಸಾಹಿತಿ ಟಿ. ಸತೀಶ್‌ಜವರೇಗೌಡ, ’ಆದಿರಾಗ’ ಕವನ ಸಂಕಲನ ಕುರಿತು ಕವಯಿತ್ರಿ ಸೌಗಂಧಿಕಾ ಜೋಯಿಸ್ ಮಾತನಾಡಿದರು.
ಡಯಟ್‌ನ ಹಿರಿಯ ಉಪನ್ಯಾಸಕಿ ಅಲ್ ಹುಸ್ನ, ಕೃತಿಕಾರ ಆದಿಲ್ ಪಾಷ (ಆದೀಶ) ಸಿರಿಗನ್ನಡ ವೇದಿಕೆಯ ನಗರ ಘಟಕ ಗೌರವಾಧ್ಯಕ್ಷ ಬಿ. ಬಾಲಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ರಾಘವೇಂದ್ರ, ಜಂಟಿ ಕಾರ್ಯದರ್ಶಿಗಳಾದ ಮೊಹಮ್ಮದ್ ಹುಮಾಯೂನ್ ಮತ್ತು ಪರಮೇಶ್ ಕೆ. ಉತ್ತನಹಳ್ಳಿ ಇತರರಿದ್ದರು.