ಶ್ರೀ ಅನಂತೇಶ್ವರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು. ಡಾ.ಎಚ್.ಪಿ.ಶೋಭಾ, ಟಿ.ತ್ಯಾಗರಾಜು, ಸುನಿಲ್, ನಾಗರಾಜ ವಿ.ಬೈರಿ ಇತರರಿದ್ದರು. 
ಮೈಸೂರು

ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ ಹೇಳಿಕೆ
  • ಗಾನಕೋಗಿಲೆ ಎಸ್.ಜಾನಕಿ ಸವಿ ನೆನಪು ಕಾರ್ಯಕ್ರಮ

ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ನಿಜವಾಗಿಯೂ ಸಹಕಾರಿ ಎಂದು ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ.ಶೋಭಾ ಹೇಳಿದರು.

ಬೆಂಗಳೂರಿನ ವಿಜಯ್ ಸಿನಿ ಟಾಕ್ಸ್, ಮೈಸೂರಿನ ಅಲೆಯನ್ಸ್ ಕ್ಲಬ್ ಆಫ್ ಕರುನಾಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಾಸವಿ ಕಲಾ ಸೇವಾ ಟ್ರಸ್ಟ್ ವತಿಯಿಂದ ಹೂಟಗಳ್ಳಿ ಕೆಎಚ್‌ಬಿ ಕಾಲನಿಯ ಶ್ರೀ ಅನಂತೇಶ್ವರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಗಾನಕೋಗಿಲೆ ಎಸ್.ಜಾನಕಿ ಸವಿ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಎಷ್ಟೇ ಒತ್ತಡದಲ್ಲಿದ್ದರೂ ಸಂಗೀತ ಕೇಳಿದರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಅದರಲ್ಲೂ ಎಸ್.ಜಾನಕಿ ಅವರು ಹಾಡಿರುವ ಗೀತೆಗಳನ್ನು ಕೇಳುವುದೇ ಒಂದು ಆನಂದ. ಅವರು ಕೇವಲ ಗಾಯಕಿಯಾಗಿರಲಿಲ್ಲ. ದೇವಾಂಶಸಂಭೂತರಂತಿದ್ದರು ಎಂದು ಸ್ಮರಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿ, ಎಸ್.ಜಾನಕಿ ಅವರು ದೇಶದ 14 ಭಾಷೆಗಳಲ್ಲದೇ ವಿದೇಶಿ ಭಾಷೆಗಳಲ್ಲೂ ಹಾಡುವ ಮೂಲಕ ವಿಶ್ವ ಗಾಯಕಿ ಎನಿಸಿಕೊಂಡಿದ್ದರು ಎಂದರು.
ಬಿ.ಜಿ.ಪುರದ ಧರೆಗೆ ದೊಡ್ಡವರು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಬಿ.ಎಸ್.ಜ್ಞಾನಾನಂದ ಚನ್ನರಾಜೇ ಅರಸ್ ಮಾತನಾಡಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನಕ್ಕೆ ನೀಡಿರುವ ಕೊಡುಗೆಯನ್ನು ಯಾವತ್ತೂ ಮರೆಯುವಂತಿಲ್ಲ. ನೀರಾವರಿ, ವಿದ್ಯುತ್, ಕೈಗಾರಿಕೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಅವರು ಜನರಿಗೆ ದೊರಕಿಸಿಕೊಟ್ಟವರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಹಾಗೂ ಅಲೆಯನ್ಸ್ ಕರುನಾಡು ಅಧ್ಯಕ್ಷ ಟಿ. ತ್ಯಾಗರಾಜು ಮಾತನಾಡಿ, ಭಾಷೆಯಿಂದ ಸಾಹಿತ್ಯ, ಸಾಹಿತ್ಯದಿಂದ ಸಂಗೀತ, ಗಾಯನ ಎಲ್ಲವೂ. ಆದ್ದರಿಂದ ಯಾವತ್ತೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದರು.
ವಿಜಯ್ ಸಿನಿ ಟಾಕ್ಸ್ ಮುಖ್ಯಸ್ಥ ಸುನಿಲ್ ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲಯನ್ ಕುಮಾರ್, ನಾಗರತ್ನ, ಸನ್ಮತಿ ಅರಸು ಇದ್ದರು.