ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ಗೀತ ಸಂಜೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ನಾಗರಾಜ್ ವಿ. ಬೈರಿ, ಕೆ.ಬಿ.ಲಿಂಗರಾಜು, ಮಡ್ಡಿಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಕೆ. ರಘುರಾಂ ವಾಜಪೇಯಿ, ಜಯಪ್ಪ ಹೊನ್ನಾಳಿ ಇದ್ದರು. 
ಮೈಸೂರು

ಸಂಗೀತ ಮತ್ತು ಸಾಹಿತ್ಯ ಜೋಡೆತ್ತಿನ ಬಂಡಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಕವಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅಭಿಮತ
  • ಗೀತ ಸಂಜೆ ಕಾರ್ಯಕ್ರಮ
ಯಾವುದೇ ಕವಿ ಗೀತೆಗಳನ್ನು ಮನರಂಜನೆಗಾಗಿ, ವಾಣಿಜ್ಯ ಉದ್ದೇಶಕ್ಕಾಗಿ ಬರೆಯುವುದಿಲ್ಲ. ಆ ರೀತಿ ಮಾಡಿದರೆ ಅದು ಕಾಗದದ ಹೂವು ಆಗುತ್ತದೆಯೇ ಹೊರತು ಸಹಜ ಹೂವು ಆಗುವುದಿಲ್ಲ ಎಂದು ಖ್ಯಾತ ಕವಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಶ್ರೀ ಅನಂತೇಶ್ವರ ಟ್ರಸ್ಟ್ ಸಹಯೋಗದಲ್ಲಿ ಪುರಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಮತ್ತು ಕಾವ್ಯ ಲೋಕವನ್ನು ಪರಿಚಯಿಸುವ ಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ರೀತಿಯ ಕಾರ್ಯಕ್ರಮಗಳಿಂದ ಕವಿಯ ಗೀತೆಗಳ ಗಾಯನದ ಜತೆಗೆ ಅವರ ವಿಚಾರಧಾರೆಯೂ ಗೊತ್ತಾಗುತ್ತದೆ. ಎಲ್ಲ ರೀತಿಯ ಕಲಾ ಪ್ರಕಾರಗಳಿಂದ ಜನರ ಮನ ಹಾಗೂ ಹೃದಯ ಪರಿವರ್ತನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಗೀತ ಮತ್ತು ಸಾಹಿತ್ಯ ಜೋಡೆತ್ತಿನ ಬಂಡಿ ಇದ್ದಂತೆ. ಸುಗಮ ಸಂಗೀತಕ್ಕೆ ಸಂಗೀತ ಮತ್ತು ಸಾಹಿತ್ಯ ಎರಡೂ ಮುಖ್ಯ ಎಂದರು.
ಸುಗಮ ಸಂಗೀತ ಪರಿಷತ್ ಜಿಲ್ಲಾ ಅಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರಮುಖ ಕವಿ ಹಾಗೂ ಲೇಖಕರು. ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಆಧುನಿಕ ಬದುಕಿನ ನೋವು, ಭಾವನೆ, ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ತಮ್ಮ ಕವನಗಳಲ್ಲಿ ಅತ್ಯಂತ ಸರಳ ಹಾಗೂ ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದಾರೆ ಎಂದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಬ್ರಾಹ್ಮಣ ಸಮಾಜದ ಮುಖಂಡ ಕೆ.ರಘುರಾಂ ವಾಜಪೇಯಿ, ಕವಿ ಜಯಪ್ಪ ಹೊನ್ನಾಳಿ ಮುಖ್ಯ ಅತಿಥಿಗಳಾಗಿದ್ದರು.
ಗಾಯಕಿ ಶ್ವೇತಾ ದಿನೇಶ್ ಅವರ ಗಾಯನದ ಸಾರಥ್ಯದಲ್ಲಿ ಸಿ.ಎಂ. ನರಸಿಂಹಮೂರ್ತಿ, ಎಸ್.ವಿ. ಎರ‌್ರಿಸ್ವಾಮಿ, ಎಚ್.ವಿ. ತಿರುಮಲೇಶ್, ನಿಂಗರಾಜು, ಗೀತಾ ಲಕ್ಷ್ಮೀಕಿಣಿ, ಸುಜಾತಾ ಜಯಕುಮಾರ್, ರೇಖಾ, ಪದ್ಮಾರಾವ್, ಜಾಯ್ಸ ಥಾಮಸ್, ಎಸ್.ಶ್ವೇತಾ ಹಾಗೂ ನೇತ್ರಾವತಿ ಕಾವ್ಯಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಜಿ.ಎನ್.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಗೀತ ಗಾಯನ ಹಾಗೂ ಸಂಗೀತ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿತ್ತು. ಶಾರದಾದೇವಿ ಗೀತೆ, ಹರಿದಿದೆ ನೋಡ ಕನ್ನಡ ರಥವು, ಹಸಿರು ಚಿಗುರಿದೆ, ಮದುವೆಯ ಆಟ ತಿಳಿಯದ, ಎತ್ತ ಸಾಗಿದೆ ಭಾರತ, ನಿನ್ನ ಕಣ್ಣ ಹೂಬಾಣ ಸೇರಿ ನಾನಾ ಗೀತೆಗಳನ್ನು ಹಾಡಿ, ಸಭಿಕರ ಮನಗೆದ್ದರು.