ಮ್ಯೂಸಿಯಮ್ಸ್ ಆನ್ ವ್ಹೀಲ್ಸ್ ಕಾರ್ಯಕ್ರಮ ಅಂಗವಾಗಿ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು.
- ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಅಭಿಪ್ರಾಯ
- ದೇಶದ ಪರಂಪರೆ ಅರಿಯಲು ವಸ್ತುಸಂಗ್ರಹಾಲಯ ನೆರವು
- ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ
ಮೈಸೂರು: ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಅಂಗವಾಗಿ ಮ್ಯೂಸಿಯಮ್ಸ್ ಆನ್ ವ್ಹೀಲ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಪ್ರಾದೇಶಿಕ ಕೇಂದ್ರ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಂಧ ಮತ್ತು ಕಿವುಡ ಶಾಲಾ ಮಕ್ಕಳು, ಶಕ್ತಿಧಾಮದ ಸ್ತ್ರೀಶಕ್ತಿ ಮತ್ತು ಸಬಲೀಕರಣ ಕೇಂದ್ರದ ವಿದ್ಯಾರ್ಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಶೋಧಕರು, ಇತಿಹಾಸ ಆಸಕ್ತರು ಹಾಗೂ ಸಾರ್ವಜನಿಕರು ಭಾಗಿಯಾಗುವ ಮೂಲಕ ವಸ್ತುಸಂಗ್ರಹಾಲಯಗಳನ್ನು ವೀಕ್ಷಣೆ ಮಾಡಿ ಸಂಭ್ರಮಿಸಿದರು.
ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ, ಪಯಣ (ಕಾರ್ ಮ್ಯೂಸಿಯಂ), ಶ್ರೀರಂಗಪಟ್ಟಣ ನಂತರ ಮೈಸೂರಿನ ಪ್ರಾಕೃತಿಕ ಪ್ರಾದೇಶಿಕ ವಸ್ತುಸಂಗ್ರಹಾಲಯ, ರೈಲ್ವೆ ಮ್ಯೂಸಿಯಂ ಭೇಟಿ ಬಳಿಕ ಕಲಾ ಗ್ಯಾಲರಿಯಲ್ಲಿ ಸಂಚಾರ ಕಾರ್ಯಕ್ರಮ ಮುಕ್ತಾಯಗೊಂಡಿತು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ, ವಸ್ತು ಸಂಗ್ರಹಾಲಯಗಳು ಉತ್ತಮ ಸಮಯ ವಿನಿಯೋಗಿಸಲು, ದೇಶದ ಪರಂಪರೆ ಅರಿತುಕೊಳ್ಳಲು ನೆರವಾಗಲಿದೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವ ಪ್ರಯತ್ನಕ್ಕೆ ಇವುಗಳು ಸಹಕಾರಿಯಾಗಬಹುದು ಎಂದು ಹೇಳಿದರು.
ನೂರಾರು ವರ್ಷಗಳ ಇತಿಹಾಸವನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಟ್ಟಿಕೊಡುವ ಕೆಲಸ ನಮ್ಮ ಇಲಾಖೆಯಿಂದ ಮಾಡಲಾಗುತ್ತಿದೆ. ಜ್ಞಾನದ ತಾಣವಾಗಿರುವ ಮ್ಯೂಸಿಯಂಗಳಲ್ಲಿರುವ ಆಸಕ್ತಿದಾಯಕ ವಿಚಾರಗಳನ್ನು ತಿಳಿಯುವ ಕೌತುಕ ಮೈಗೂಡಿಸಿಕೊಳ್ಳಬೇಕು.
ಆದರೆ, ಸಂಗ್ರಹಾಲಯಗಳಲ್ಲಿರುವ ವಿಶೇಷತೆಗಳನ್ನು ವಿವರಿಸುವ ಕೆಲಸ ಪಾಲಕರು, ಶಿಕ್ಷಕರು ಮಾಡಲ್ಲ. ಇಲ್ಲಿಗೆ ಬಂದಾಗ ಕಲಾಕೃತಿ, ಪ್ರಾಚ್ಯಾವಶೇಷಗಳ ಕುರಿತ ಜ್ಞಾನದಾಹ ಹೆಚ್ಚಬೇಕು. ಆಗ ಮಾತ್ರ ಈ ವಿಷಯ ಆಸಕ್ತಿದಾಯಕವಾಗಿ ಗೋಚರವಾಗುತ್ತದೆ ಎಂದರು.
ಇಲಾಖೆ ಅಧಿಕಾರಿಗಳಾದ ಮಂಜುಳಾ, ತಾರಕೇಶ್, ಅಶೋಕ್‌ವರ್ಧನ್, ಇತಿಹಾಸಕಾರ ಲಾನಾ ಸ್ವಾಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ರಾಘವೇಂದ್ರ ಇದ್ದರು.