ತಪ್ಪಾಗಿ ನೀಡಿರುವ ಮರಣಪ್ರಮಾಣ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ(ಸಾಮೂಹಿಕ ನಾಯಕತ್ವ) ಹಾಗೂ ಹಸಿರು ಸೇನೆಯಿಂದ ನಗರಪಾಲಿಕೆ ಮುಂಭಾಗ ಪ್ರತಿಭಟನೆ ನಡೆಯಿತು. ವಿದ್ಯಾಸಾಗರ್, ರಘು ಹಿಮ್ಮಾವು, ಸತೀಶ್‌ರಾವ್, ಅಹಲ್ಯಾನಂಜುಂಡ, ಶ್ವೇತಾ, ರತ್ನಾ, ಮಹದೇವನಾಯಕ, ಗುರುಸ್ವಾಮಿ, ಪ್ರೇಮಾ, ದೇವರಾಜು ಇತರರು ಇದ್ದರು. 
ಮೈಸೂರು

ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ ನಗರಪಾಲಿಕೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಶಿವಣ್ಣಾಚಾರಿ ಜತೆಗೆ ಮಗ ಎಸ್.ಗುರುಸ್ವಾಮಿಯೂ ಮೃತಪಟ್ಟಿದ್ದಾರೆ ಎಂದು ಪ್ರಮಾಣಪತ್ರ
  • ಇದರಿಂದ ರೇಷನ್ , ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿರುವ ಗುರುಸ್ವಾಮಿ
ಮೈಸೂರು:ಅಪ್ಪ ಮೃತಪಟ್ಟಿದ್ದರೆ ಬದುಕಿರುವ ಮಗನ ಹೆಸರಿಗೆ ಮರಣ ಪ್ರಮಾಣ ಪತ್ರ ನೀಡಿರುವ ನಗರಪಾಲಿಕೆ ಕ್ರಮ ಖಂಡಿಸಿ ರಾಜ್ಯ ರೈತ ಸಂಘ(ಸಾಮೂಹಿಕ ನಾಯಕತ್ವ) ಹಾಗೂ ಹಸಿರು ಸೇನೆಯಿಂದ ನಗರಪಾಲಿಕೆ ಮುಂಭಾಗ ಪ್ರತಿಭಟನೆ ನಡೆಯಿತು.
ಬದುಕಿರುವವರಿಗೆ ಮರಣ ಪ್ರಮಾಣಪತ್ರ ನೀಡಿದ್ದಲ್ಲದೆ ಅದನ್ನು ಸರಿಪಡಿಸಲು ವರ್ಷಾನುಗಟ್ಟಲೆ ಕಚೇರಿಗೆ ಅಧಿಕಾರಿಗಳು ಅಲೆದಾಡುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಗುಂಡ್ಲುಪೇಟೆ ತಾಲೂಕು ಹೊರೆಯಾಲದ ಶಿವಣ್ಣಾಚಾರಿ ಎಂಬುವರು 2021ರಲ್ಲಿ ಮೈಸೂರಿನಲ್ಲಿ ಮೃತಪಟ್ಟಿದ್ದರು. ಮರಣ ಪ್ರಮಾಣ ಪತ್ರ ನೀಡುವಾಗ ರೇಷನ್, ಆಧಾರ್ ಕಾರ್ಡ್ ಪಡೆದಿದ್ದ ನಗರಪಾಲಿಕೆ ಸಿಬ್ಬಂದಿ, ಶಿವಣ್ಣಾಚಾರಿ ಜತೆಗೆ ಮಗ ಎಸ್.ಗುರುಸ್ವಾಮಿಯೂ ಮೃತಪಟ್ಟಿದ್ದಾರೆ ಎಂದು ಪ್ರಮಾಣಪತ್ರ ನೀಡಿದ್ದರು. ಈ ಕುರಿತು ಮರು ಅರ್ಜಿ ಸಲ್ಲಿಸಿ, ಬದುಕಿರುವ ನನ್ನನ್ನು ಮೃತಪಟ್ಟಿದ್ದಾರೆ ಎಂದು ಪ್ರಮಾಣಪತ್ರ ನೀಡಿರುವ ತಪ್ಪನ್ನು ಸರಿಪಡಿಸುವಂತೆ ಗುರುಸ್ವಾಮಿ ಕೋರಿದ್ದರು.
ಆದರೆ, ಗುರುಸ್ವಾಮಿ ಹೆಸರಿನ ಮರಣ ಪತ್ರವನ್ನು 2021ರಿಂದ ಸರಿಪಡಿಸಿಲ್ಲ. ಸರ್ಕಾರ ಯಾವುದಾದರೂ ಸೌಲಭ್ಯಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಆಧಾರ್ ಸಂಖ್ಯೆ ನಮೂದಿಸಿದರೆ ಗುರುಸ್ವಾಮಿ ಮೃತಪಟ್ಟಿದ್ದಾರೆ ಎಂದು ತೋರುತ್ತಿತ್ತು. ಇದರಿಂದ ಅವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಾ ಬಂದಿದ್ದಾರೆ ಎಂದು ದೂರಿದರು.
ಈ ಕುರಿತು ಹಲವು ಬಾರಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗುರುಸ್ವಾಮಿ ಅವರ ಹೆಸರಿನಲ್ಲಿರುವ ಮರಣ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು. ಈ ಪ್ರಮಾದ ಮಾಡಿರುವ ನಗರಪಾಲಿಕೆ ಸಿಬ್ಬಂದಿ, ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜನನ, ಮರಣ ವಿಭಾಗದ ಉಸ್ತುವಾರಿ ಮೃತುೃಂಜಯ , ಈಗಾಗಲೇ ಜಿಲ್ಲಾ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಇನ್ನು 15 ದಿನಗಳ ಒಳಗಾಗಿ ಮರಣ ಪ್ರಮಾಣ ಪತ್ರ ರದ್ದು ಪಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಮುಖಂಡರಾದ ರಘು ಹಿಮ್ಮಾವು, ಸತೀಶ್‌ರಾವ್, ಅಹಲ್ಯಾನಂಜುಂಡ, ಶ್ವೇತಾ, ರತ್ನಾ, ಮಹದೇವನಾಯಕ, ಗುರುಸ್ವಾಮಿ, ಪ್ರೇಮಾ, ದೇವರಾಜು ಇನ್ನಿತರರು ಇದ್ದರು.