ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಬಸ್ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪುರಸಭೆಯ ಸಿಬ್ಬಂದಿ ಸ್ವಚ್ಛಗೊಳಿಸಿದರು.
ಪಿರಿಯಾಪಟ್ಟಣ: ಬಸ್ ನಿಲ್ದಾಣದಲ್ಲಿ ಅಶುಚಿತ್ವ ತಾಂಡವ ಶೀರ್ಷಿಕೆಯಡಿ ಭಾನುವಾರ ವಿಜಯವಾಣಿಯಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪುರಸಭೆಯ ಸಿಬ್ಬಂದಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಬಸ್ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.
ಕಳೆದ ಸುಮಾರು ಒಂದು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಗಿಡ ಗಂಟೆಗಳು ಬೆಳೆದು, ಪುಂಡು ಪೋಕರಿಗಳ ತಾಣವಾಗಿದ್ದ ಬಸ್ ನಿಲ್ದಾಣಗಳು ಗಬ್ಬು ನಾರುವಂತಾಗಿದ್ದವು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಪ್ರಯಾಣಿಕರು ಬಸ್ ಗಳಿಗಾಗಿ ಕಾಯಲು ರಸ್ತೆಯಲ್ಲಿಯೇ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದ್ದರಿಂದ, ಈ ಬಗ್ಗೆ ಪತ್ರಿಕೆಯಲ್ಲಿ ವಿಸ್ತೃತವಾದ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಹಾಗೂ ಹೆಲ್ತ್ ಇನ್ ಸ್ಪೆಕ್ಟರ್ ಮೋಹನ್ ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರಗಳ ಸಹಕಾರದೊಂದಿಗೆ ಗಿಡ ಗಂಟೆಗಳನ್ನು ತೆರವುಗೊಳಿಸಿ ಕಾಂಪೌಂಡ್ ಮುಂಭಾಗದ ಆವರಣ ಸೇರಿದಂತೆ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದ್ದಾರೆ.