ಮೂಗೂರು ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಉದ್ಘಾಟಿಸಿದರು. ಎಂ.ಚಂದ್ರಶೇಖರ, ಬಾಲ ಶಂಕರ್, ರಶ್ಮಿ ರಾಜು, ಸಿದ್ದರಾಜು, ಡಾ.ರಮೇಶ್, ಬಸವರಾಜು, ಎಂ.ಪಿ.ನಾಗರಾಜು ಇದ್ದರು.
ಮೂಗೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ತಿಳಿಸಿದರು.
ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವ ವಿಕಸನವಾಗಬೇಕಾದರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಾಲೂಕಿನಲ್ಲೇ ಅತಿ ಹೆಚ್ಚು ಮಕ್ಕಳ ದಾಖಲಾತಿಯನ್ನು ಪಡೆದ ಕೆಪಿಎಸ್ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಶಾಲೆಯಲ್ಲಿ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಸಾಧನೆ ಮಾಡಲಿ. ಹೆಚ್ಚು ಪ್ರತಿಭಾವಂತರಾಗಲು ಪಾಲಕರು ಮಕ್ಕಳಿಗೆ ಉತ್ತಮ ಅವಕಾಶವನ್ನು ಒದಗಿಸಿಕೊಡಬೇಕು ಎಂದರು.
ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ ಮಾತನಾಡಿ, ಮಕ್ಕಳ ಜವಾಬ್ದಾರಿಯನ್ನು ಅರಿತ ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಒತ್ತಡದ ನಡುವೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಪರಿಪೂರ್ಣ ಶಿಕ್ಷಣ ಪಡೆದುಕೊಳ್ಳಲು ಶಾಲಾಭಿವೃದ್ಧಿ ಸಮಿತಿ ಸಹಕಾರ ಅತ್ಯಗತ್ಯ ಎಂದರು.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲ ಶಂಕರ್, ರಶ್ಮಿ ರಾಜು, ಮಾಜಿ ಅಧ್ಯಕ್ಷ ಸಿದ್ದರಾಜು, ಡಾ.ರಮೇಶ್, ಇಸಿಒ ಬಸವರಾಜು, ಎಂ.ಪಿ.ನಾಗರಾಜು, ತುಮ್ನೇರಳೆ ಪಿಡಿಒ ರಾಜಶೇಖರ ಮೂರ್ತಿ, ಸಿಆರ್‌ಪಿ ಶಿವರಾಜ್, ಮುಖ್ಯ ಶಿಕ್ಷಕಿ ರುಕ್ಮಿಣಿ, ಮಂಜುಳಾ ಬಾಯಿ, ಕೃಷ್ಣೇಗೌಡ, ರಮೇಶ್ ನಾಯ್ಕ, ಪ್ರಕಾಶ್, ಸತೀಶ್, ಸಮಿತಿ ಸದಸ್ಯ ಪರಶಿವಮೂರ್ತಿ, ಮಧು, ಕುಮಾರ್, ಶ್ರುತಿ, ಸೌಮ್ಯಾ, ರೂಪಾ, ಶಿಕ್ಷಕರು, ಪಾಲಕರು ಹಾಜರಿದ್ದರು.