ಮೈಸೂರು ನಗರವನ್ನು ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದರು. 
ಮೈಸೂರು

ಮೈಸೂರನ್ನು ಆರ್ಥಿಕ ವಲಯಕ್ಕೆ ಸೇರ್ಪಡೆಗೊಳಿಸಲು ಸಂಸದ ಯದುವೀರ್ ಕೇಂದ್ರಕ್ಕೆ ಮನವಿ

ಮೈಸೂರು: ಮೈಸೂರು ನಗರವನ್ನು ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಲು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನವದೆಹಲಿಯಲ್ಲಿ ಬುಧವಾರ ಮನವಿ ಸಲ್ಲಿಸಿದ್ದಾರೆ.
ಬಜೆಟ್‌ನಲ್ಲಿ ಘೋಷಣೆ ಮಾಡಿರುವ ನಗರ ಆರ್ಥಿಕ ವಲಯ ಯೋಜನೆಗೆ ಮೈಸೂರು ನಗರವನ್ನೂ ಸೇರ್ಪಡೆ ಮಾಡಬೇಕು. ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಅದನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಈ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್ ಒಡೆಯರ್, ನಗರ ಆರ್ಥಿಕ ವಲಯಕ್ಕೆ ಮೈಸೂರನ್ನು ಸೇರಿಸಬೇಕು ಎಂದು ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಬುಧವಾರ ಮತ್ತೊಮ್ಮೆ ಈ ಕುರಿತು ಮನವಿ ಸಲ್ಲಿಸಿದಾಗ, ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಯೋಜನೆಗೆ ಮೈಸೂರು ಸೇರ್ಪಡೆಯಾದರೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ದೊರೆಯುತ್ತದೆ ಎಂದರು.
ಮೈಸೂರು ಈಗಾಗಲೇ ಶ್ರೀಮಂತ ಪಾರಂಪರೆ ಹಾಗೂ ಪರಿಸರವನ್ನು ಹೊಂದಿದೆ. ಅದಕ್ಕೆ ಯಾವುದೇ ಧಕ್ಕೆಯಾಗದಂತೆ, ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮುಂದಾಗಲಿದ್ದೇವೆ ಎಂದು ಸಂಸದರು ತಿಳಿಸಿದರು.
ಮೈಸೂರು ಅಭಿವೃದ್ಧಿ ಕುರಿತು ಎಲ್ಲ ಕ್ಷೇತ್ರದ ತಜ್ಞರು, ನಾಯಕರು ಹಾಗೂ ಮುಖಂಡರು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸಲಹೆ-ಸೂಚನೆ, ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ಯದುವೀರ್ ವಿವರಿಸಿದರು.
ಐದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಎರಡು ಮತ್ತು ಮೂರನೇ ಸ್ತರದ ನಗರಗಳು, ತೀರ್ಥಕ್ಷೇತ್ರಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಸುಧಾರಣೆಯನ್ನೂ ಕೈಗೊಳ್ಳಲಾಗುತ್ತದೆ. ಹಲವು ಬಾರಿ ಮನವಿ ಮಾಡಿದ್ದರಿಂದ ನಿರ್ಮಲಾ ಸೀತಾರಾಮನ್ ಅವರು ಮೈಸೂರನ್ನು ಈ ಯೋಜನೆಗೆ ಸೇರಿಸಲು ಭರವಸೆ ನೀಡಿದ್ದಾರೆ ಎಂದರು.
ಈ ಯೋಜನೆಗಳು ಆವಿಷ್ಕಾರ ಮತ್ತು ಅವಕಾಶಗಳ ಹೆಬ್ಬಾಗಿಲು ತೆರೆಯಲಿವೆ. ನಮ್ಮ ನಗರವನ್ನು ಇನ್ನಷ್ಟು ಸುಂದರಗೊಳಿಸಲು, ಅಭಿವೃದ್ಧಿಗೊಳಿಸಲು ಈಗ ಅವಕಾಶ ದೊರೆಯುತ್ತದೆ. ಅದನ್ನು ಎಲ್ಲರೂ ಸೇರಿ ಸದ್ವಿನಿಯೋಗಗೊಳಿಸೋಣ. ಈ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸೋಣ, ಮೈಸೂರನ್ನು ಜಗದ್ವಿಖ್ಯಾತಿಗೊಳಿಸೋಣ ಎಂದು ತಿಳಿಸಿದ್ದಾರೆ.
ಏನಿದು ನಗರ ಆರ್ಥಿಕ ವಲಯ: ನಗರಾಭಿವೃದ್ಧಿಯ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರು, ಸೂರತ್, ವಾರಾಣಸಿ, ವಿಶಾಖಪಟ್ಟಣಂ, ಭುವನೇಶ್ವರ್, ಪುರಿ, ಕಟಕ್, ಕೊಯಮತ್ತೂರು, ಈರೋಡ್, ತಿರುಪೂರ್ ಒಳಗೊಂಡಂತೆ ನಗರ ಆರ್ಥಿಕ ವಲಯ ಯೋಜನೆ ರೂಪಿಸಲಾಗಿದೆ. ಪ್ರತಿ ವಲಯಕ್ಕೆ ವಾರ್ಷಿಕ ಐದು ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗುತ್ತಿದೆ. ಈ ಹಣದಲ್ಲಿ ನಗರ ಅಭಿವೃದ್ಧಿ ಕೈಗೊಳ್ಳಲು ಬಳಸಲಾಗುತ್ತದೆ. ಖಾಸಗಿ-ಸರ್ಕಾರ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇದರೊಂದಿಗೆ ಪ್ರಾದೇಶಿಕ ಮೆಡಿಕಲ್ ಹಬ್ ಯೋಜನೆ ಕೂಡ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.