ನಗರದಲ್ಲಿ ಆಯೋಜಿಸಿದ್ದ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ಡಾ.ಸಿ.ಎನ್.ಮಂಜುನಾಥ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ. ಚಂದ್ರಶೇಖರ್, ಸುಂದರ್‌ರಾಜ್, ಗಿರಿಜಾ ಲೋಕೇಶ್, ರಾಜೇಂದ್ರಸಿಂಗ್‌ಬಾಬು, ಚೇತನ್, ಪದ್ಮಾವತಿ ಭಟ್ ಇತರರು ಇದ್ದರು. 
ಮೈಸೂರು

‘ನಾಲ್ವಡಿ’ ಕುರಿತು ಚಲನಚಿತ್ರ ನಿರ್ಮಾಣವಾಗಲಿ: ಸಂಸದ ಡಾ.ಸಿ.ಎನ್.ಮಂಜುನಾಥ್ ಆಶಯ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಅರಸರ ಬಗ್ಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಯಾವುದೇ ಚಲನಚಿತ್ರ ನಿರ್ಮಾಣವಾಗಿಲ್ಲ
  • ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಹಲವರು ಮೈಸೂರನ್ನು ಬಹಳ ಇಷ್ಟಪಡುತ್ತಿದ್ದರು
ಮೈಸೂರು:ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಚಲನಚಿತ್ರ ನಿರ್ಮಾಣವಾಗಬೇಕು. ಅದು ಅರಸು ಅವರಿಗೆ ಕೊಡುವ ಗೌರವವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾರಂಪರಿಕ, ಸಾಂಸ್ಕೃತಿಕ ಅರಮನೆ ನಗರಿ ಮೈಸೂರಿಗೆ ವಿಶೇಷವಾದ ಆಕರ್ಷಣೆ ಇದೆ. ಇಲ್ಲೇ ಚಲನಚಿತ್ರಗಳು ಆರಂಭದ ದಿನಗಳಲ್ಲಿ ಹೆಚ್ಚು ಚಟುವಟಿಕೆ ನಡೆಯುತ್ತಿದ್ದವು. ಮೈಸೂರಿನ ಬಗ್ಗೆ ಇದೂವರೆಗೆ ಹಲವು ಚಲನಚಿತ್ರಗಳು ನಿರ್ಮಾಣವಾಗಿವೆ. ಆದರೆ ಮೈಸೂರು ಅರಸರ ಬಗ್ಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಯಾವುದೇ ಚಲನಚಿತ್ರ ನಿರ್ಮಾಣವಾಗಿಲ್ಲ ಎಂದರು.
ಮುಂದಿನ ದಿನಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಚಲನಚಿತ್ರ ನಿರ್ಮಾಣವಾಗಬೇಕು. ಅದರ ಮೂಲಕ ಅವರ ಅಮೂಲ್ಯ ಕೊಡುಗೆಗಳನ್ನು ಜನರಿಗೆ ತಿಳಿಸಿದಂತೆ ಆಗುತ್ತದೆ. ಅದೇ ಅರಸು ಅವರಿಗೆ ಕೊಡುವ ಗೌರವವಾಗುತ್ತದೆ ಎಂದು ಹೇಳಿದರು.
ಮೈಸೂರು ನಗರಕ್ಕೆ ಚಲಚಚಿತ್ರದ ಆಕರ್ಷಣೆ ಇದೆ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಹಲವರು ಮೈಸೂರನ್ನು ಬಹಳ ಇಷ್ಟಪಡುತ್ತಿದ್ದರು. ಇಂದು ಆಧುನಿಕ ತಂತ್ರಜ್ಞಾನದ ಸ್ಫೋಟಕ ಯುಗದಲ್ಲಿ ಜನರಿಗೆ ಸಿನಿಮಾ ನೋಡಲು ಸಮಯವಿಲ್ಲವಾಗಿದೆ. ನಾನು ಎಂಬಿಬಿಎಸ್ ಮಾಡುವಾಗ ಯಾವುದೇ ಕನ್ನಡ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ನೋಡುತ್ತಿದ್ದೆ. ಈಗ ದೊಡ್ಡ ದೊಡ್ಡ ಸಿನಿಮಾ ಥಿಯೇಟರ್‌ಗಳನ್ನು ಒಡೆದು ಮಲ್ಟಿಫ್ಲೆಕ್ಸ್ ಕಟ್ಟಡ ಕಟ್ಟುತ್ತಿದ್ದಾರೆ ಎಂದರು.
ರಾಮಾಯಣ, ಮಹಾಭಾರತ, ಭಗವದ್ಗಿತೆಗಳು ಏನು ಮಾಡಬೇಕು? ಯಾವುದನ್ನು ಮಾಡಬಾರದು? ಹೀಗೆ ಬದುಕಬೇಕು ಎಂಬುದನ್ನು ತಿಳಿಸುತ್ತವೆ. ಈ ಚಲನಚಿತ್ರ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ. ಸುಮಾರು 3 ಸಾವಿರ ಕಿರುಚಿತ್ರ, ಡಾಕ್ಯುಮೆಂಟ್ರಿಗಳನ್ನು ಸ್ಕ್ರೀನ್ ಮಾಡಿ ಸುಮಾರು 30 ಚಲನಚಿತ್ರಗಳಿಗೆ ಪ್ರಶಸ್ತಿ ನೀಡುತ್ತಿದ್ದಾರೆ ಎಂದರು.
ಚಲನಚಿತ್ರಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಮಾದಕ ವಸ್ತುಗಳ ಬಗ್ಗೆ ಜಾಗೃತಿ, ವಿಶೇಷ ಮಕ್ಕಳ ಬಗ್ಗೆ ಆದರ್ಶ ವ್ಯಕ್ತಿಗಳ ಬಗ್ಗೆ ಸಮಾಜದ ಪರಿವರ್ತನೆ ಬಗ್ಗೆ ಜಾಗೃತಿ ಮೂಡಿಸುವ ಸಮಾಜಕ್ಕೆ ಸೇತುವೆಯಾಗುವ ಚಿತ್ರಗಳು ನಿರ್ಮಾಣವಾಗಬೇಕು ಎಂದು ಹೇಳಿದರು.
ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಮಿತಿಯ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಚಲನಚಿತ್ರ ನಟ, ನಟಿಯರಾದ ಸುಂದರ್‌ರಾಜ್, ಗಿರಿಜಾ ಲೋಕೇಶ್, ರಾಜೇಂದ್ರಸಿಂಗ್‌ಬಾಬು, ಚೇತನ್, ಪದ್ಮಾವತಿ ಭಟ್ ಇತರರಿದ್ದರು.