ಹನಗೋಡು ಹೋಬಳಿ ವ್ಯಾಪ್ತಿಯ ಪ್ರಜಾ ಸೇವಾ ಆಂದೋಲನ ಸಭೆಯನ್ನು ತಹಸೀಲ್ದಾರ್ ಜೆ.ಮಂಜುನಾಥ್ ಉದ್ಘಾಟಿಸಿದರು. ಶ್ರೀಪಾದ್, ಶರತ್ ಕುಮಾರ್, ನಂದೀಶ್ ಇತರರು ಇದ್ದರು. 
ಮೈಸೂರು

ಗ್ರಾಪಂ ಮಟ್ಟದಲ್ಲಿಯೂ ‘ಪ್ರಜಾ ಸೇವೆ’ಗೆ ಚಿಂತನೆ

ಹನಗೋಡು: ರಾಜ್ಯ ಸರ್ಕಾರವು ಪ್ರಜಾ ಸೇವಾ ಆಂದೋಲನದ ಮೂಲಕ ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ದು ಅವರ ಸಮಸ್ಯೆ ಆಲಿಸಿ ಪರಿಹರಿಸುತ್ತಿದೆ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ತಿಳಿಸಿದರು.
ಹನಗೋಡಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಂದಾಯ ಇಲಾಖೆ ಆಯೋಜಿಸಿದ್ದ ಹನಗೋಡು ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರವು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪ್ರಜಾಸೇವಾ ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಏಳು ದಿನಗಳೊಳಗಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ, ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಿ, ಯಾವ ಕಾರಣಕ್ಕೆ ಅರ್ಜಿ ವಿಲೇವಾರಿಯಾಗಿಲ್ಲ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಒಟ್ಟು 124 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 54 ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಿದರು.
ಅಧಿಕಾರಿಗಳ ಗೈರಿಗೆ ಆಕ್ರೋಶ: ಸಭೆಯಲ್ಲಿ ಅರ್ಜಿ ಸಲ್ಲಿಸಿ ಮಾತನಾಡಿದ ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಹಲವು ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಹಲವು ಅಕ್ರಮಗಳ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ, ಸಹಕಾರ ಇಲಾಖೆಯ ಯಾವುದೇ ಅಧಿಕಾರಿಗಳು ಸಭೆಗೆ ಹಾಜರಾಗದಿರುವುದಕ್ಕೆ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆ ಜಾಗದಲ್ಲಿ ಬಡಾವಣೆಗೆ ಆಕ್ಷೇಪ: ಹನಗೋಡು-ಹುಣಸೂರು ಮುಖ್ಯರಸ್ತೆಯಲ್ಲಿರುವ ಈಡನ್ ಗಾರ್ಡನ್ ಬಡಾವಣೆಯಲ್ಲಿ ನಿವೇಶನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಈ ಹಿಂದೆ ನೂರಾರು ಅಡಿ ಅಳವಾಗಿ ಗುಂಡಿ ತೋಡಿ ಮ್ಯಾಗ್ನೀಷಿಯಂ ಗಣಿಗಾರಿಕೆ ನಡೆಸಲಾಗಿತ್ತು. ಈಗ ಅದೇ ಜಾಗದಲ್ಲಿ ಪಂಚಾಯಿತಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಗುಂಪು ಮನೆ ಕಾಮಗಾರಿ ಕಳಪೆ :ದೊಡ್ಡಹೆಜ್ಜೂರು ಗ್ರಾಮದ ಡಿಎಸ್‌ಎಸ್ ಮುಖಂಡ ನಾಗೇಶ್ ಮಾತನಾಡಿ, ಆದಿವಾಸಿ ಜನಾಂಗದವರಿಗೆ ಹಾಡಿಗಳಲ್ಲಿ ಗುಂಪು ಮನೆ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದರೂ, ಇದೂವರೆಗೆ ಶೇ.30ರಷ್ಟು ಮನೆಗಳಷ್ಟೇ ನಿರ್ಮಾಣಗೊಂಡಿವೆ. ನಿರ್ಮಿಸಿರುವ ಮನೆಗಳಲ್ಲಿಯೂ ಕಳಪೆ ಎಂಬ ಆರೋಪ ಕೇಳಿ ಬರುತ್ತಿದ್ದು, ಶೀಘ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಪರಿಸರ ಸೂಕ್ಷ್ಮವಲಯದಿಂದ ಗ್ರಾಮ ಕೈಬಿಡಿ: ಹನಗೋಡು ಹೋಬಳಿಯು ಕಾಡಂಚಿನ ಪ್ರದೇಶವಾಗಿದ್ದು, ಅರಣ್ಯ ಇಲಾಖೆಯು ಕಾಡಂಚಿನ ಗಡಿಯಿಂದ 7.5 ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದರಿಂದ ಹೋಬಳಿಯ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಪರಿಶೀಲಿಸಿ, ಅರ್ಹವಲ್ಲದ ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ತಾಪಂ ಮಾಜಿ ಸದಸ್ಯ ಕೆ.ಗಣಪತಿ ಸೇರಿದಂತೆ ಕಾಡಂಚಿನ ಗ್ರಾಮಸ್ಥರು ಮನವಿ ಮಾಡಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್: ರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಆಂದೋಲನ ಸಭೆಗೆ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ತಹಸೀಲ್ದಾರ್ ಜೆ.ಮಂಜುನಾಥ್ ಅವರು ಸ್ಥಳದಲ್ಲೇ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಎಡಿಎಆರ್ ಸಿದ್ದೇಗೌಡ, ಉಪ ತಹಸೀಲ್ದಾರ್ ಶರತ್‌ಕುಮಾರ್, ಆರ್‌ಐ ನಂದೀಶ್, ಶಿರಸ್ತೇದಾರ್ ಶ್ರೀಪಾದ್, ಸುಮಂತ್, ಕರಿಬಸಪ್ಪ, ಪ್ರಕಾಶ್, ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.