ಜೆ.ಎಸ್.ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಜೆಎಸ್‌ಎಸ್‌ಎಸ್‌ಟಿಯು) ಹಾಗೂ ಪುಣೆಯ ಬಜಾಜ್ ಆಟೋ ಲಿಮಿಟೆಡ್ ನಡುವೆ ತಿಳಿವಳಿಕಾ ಒಪ್ಪಂದ (ಎಂಒಯು) ಸಹಿ ಮಾಡಲಾಗಿದೆ. ಪ್ರೊ. ಸುರೇಶ್, ಡಾ.ಸಿ.ಜೆ. ಬೆಟಸೂರಮಠ, ರವಿಕಿರಣ್ ರಾಮಸಾಮಿ, ಸುಧಾಕರ್ ಗುಡಿಪಾಟಿ, ಸಂತೋಷ್ ಕುಮಾರ್, ಎಸ್.ಎ. ಧನರಾಜ್, ಸಿ. ನಟರಾಜು ಇತರರು ಇದ್ದರು.
- ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ನೈಜ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದೆ
- ಇಂಜಿನಿಯರಿಂಗ್ ಪದವೀಧರರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗಕ್ಕೆ ತಯಾರಾಗುವಂತಹ ತರಬೇತಿ ನೀಡಲಾಗುತ್ತದೆ
ಮೈಸೂರು:ಉದ್ಯಮ ಮತ್ತು ಶೈಕ್ಷಣಿಕ ವಲಯಗಳ ನಡುವಿನ ಅಂತರ ಕಡಿಮೆ ಮಾಡಿ ವಿದ್ಯಾರ್ಥಿಗಳನ್ನು ವೃತ್ತಿ ನಿರತ ಕೌಶಲಗಳಿಗೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆಯಾಗಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಜೆಎಸ್‌ಎಸ್‌ಎಸ್‌ಟಿಯು) ಹಾಗೂ ಪುಣೆಯ ಬಜಾಜ್ ಆಟೋ ಲಿಮಿಟೆಡ್ ನಡುವೆ ತಿಳಿವಳಿಕಾ ಒಪ್ಪಂದ (ಎಂಒಯು) ಸಹಿ ಮಾಡಲಾಗಿದೆ.
ಈ ಒಪ್ಪಂದದಡಿ ಜೆಎಸ್‌ಎಸ್‌ಎಸ್‌ಟಿಯು ಆವರಣದಲ್ಲಿ ಬಜಾಜ್ ಎಂಜಿನಿಯರಿಂಗ್ ಸ್ಕಿಲ್ಸ್ ಟ್ರೈನಿಂಗ್ (ಬಿಇಎಸ್‌ಟಿ) ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಬೆಸ್ಟ್ ಕೇಂದ್ರವು ಬಜಾಜ್ ಆಟೋ ಲಿಮಿಟೆಡ್‌ನ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಾಗಿದ್ದು, ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ನೈಜ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ಸುಧಾರಿತ ಮೂಲಸೌಕರ್ಯ ಹಾಗೂ ಉದ್ಯಮದ ಮಟ್ಟದ ಉಪಕರಣಗಳು ಲಭ್ಯವಿರಲಿವೆ. ಪಠ್ಯಕ್ರಮವನ್ನು ಜೆಎಸ್‌ಎಸ್‌ಎಸ್‌ಟಿಯು ಅಧ್ಯಾಪಕರು ಮತ್ತು ಬಜಾಜ್ ಆಟೋದ ಅನುಭವಿ ಇಂಜಿನಿಯರ್‌ಗಳು ಜಂಟಿಯಾಗಿ ರೂಪಿಸಲಿದ್ದು, ಇಂಜಿನಿಯರಿಂಗ್ ಪದವೀಧರರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗಕ್ಕೆ ತಯಾರಾಗುವಂತಹ ತರಬೇತಿ ನೀಡಲಾಗುತ್ತದೆ.
ಸುಧಾರಿತ ಉತ್ಪಾದನೆ, ಆಟೊಮೇಷನ್, ರೋಬಾಟಿಕ್ಸೃ್, ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್, ಇ-ಮೊಬಿಲಿಟಿ ಮತ್ತು ಇಂಡಸ್ಟ್ರಿ 4.0 ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಕೈಗಾರಿಕಾ ತಜ್ಞರ ಉಪನ್ಯಾಸ, ನೈಜ ಔದ್ಯೋಗಿಕ ಅನುಭವ ಹಾಗೂ ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸುಸ್ಥಿರ ಕೌಶಲಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಒದಗಿಸುವುದು ಈ ಕೇಂದ್ರದ ಪ್ರಮುಖ ಗುರಿಯಾಗಿದೆ.
ಒಪ್ಪಂದದ ಬಳಿಕ ಮಾತನಾಡಿದ ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ. ಬೆಟಸೂರಮಠ, ಈ ಒಪ್ಪಂದವು ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲ ಹೆಚ್ಚಿಸಿ, ಉದ್ಯಮಕ್ಕೆ ತಕ್ಷಣ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಲಿದೆ ಎಂದು ಹೇಳಿದರು.
ಜೆಎಸ್‌ಎಸ್‌ಎಸ್‌ಟಿಯು ತಾಂತ್ರಿಕ ಶಿಕ್ಷಣ ನಿರ್ದೇಶಕ ಪ್ರೊ.ಸುರೇಶ್ ಮಾತನಾಡಿ, ಭವಿಷ್ಯದಲ್ಲಿ ಜೆ.ಎಸ್.ಎಸ್. ಸಮೂಹದ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇನ್ನಷ್ಟು ಶ್ರೇಷ್ಠತಾ ಹಾಗೂ ಕೌಶಲ ಕೇಂದ್ರಗಳನ್ನು ಸ್ಥಾಪಿಸಲು ವಿಶ್ವವಿದ್ಯಾಲಯ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಬಜಾಜ್ ಆಟೋ ಲಿಮಿಟೆಟ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರವಿಕಿರಣ್ ರಾಮಸಾಮಿ, ಜೆಎಸ್‌ಎಸ್ ಸಂಸ್ಥೆಯ ಶಿಸ್ತು ಮತ್ತು ಮೌಲಗಳು ಬಜಾಜ್ ಸಂಸ್ಥೆಯ ತತ್ವಗಳಿಗೆ ಹೊಂದಿಕೆಯಾಗುತ್ತವೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಬಜಾಜ್ ಆಟೋ ಲಿಮಿಟೆಡ್‌ನ ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷ ಸುಧಾಕರ್ ಗುಡಿಪಾಟಿ, ಕುಲಪತಿ ಸಂತೋಷ್‌ಕುಮಾರ್, ಕುಲಸಚಿವ ಎಸ್.ಎ. ಧನರಾಜ್, ಪ್ರಾಂಶುಪಾಲ ಸಿ. ನಟರಾಜು ಇತರರಿದ್ದರು.