ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗನನ್ನು ಕೊಲೆ ಮಾಡಿದ್ದ ತಾಯಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಕೆಸರೆ ಕುರಿಮಂಡಿಯ ನಿವಾಸಿ ಮಂಜುಳಾ (60) ಬಂಧಿತೆ. ಏ.14ರಂದು ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡಿಬೆಟ್ಟ ತಪ್ಪಲಿನ ತಾವರೆಕಟ್ಟೆ ಸಮೀಪದ ನಿರ್ಜನ ಪ್ರದೇಶದಲ್ಲಿ 40-45 ವರ್ಷ ವಯಸ್ಸಿನ ವ್ಯಕ್ತಿಯ ಶವ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೃತ್ಯ ನಡೆದ ಸ್ಥಳದ ಸುತ್ತಲಿನ 200ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದರು. ಇವುಗಳಲ್ಲಿ ಮಂಜುಳಾ ಚಲನವಲನಗಳು ಪತ್ತೆಯಾಗಿದ್ದವು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮದ್ಯಕ್ಕೆ ದಾಸನಾಗಿದ್ದ: ಕೊಲೆಯಾದ ರಮೇಶ್ ಮದ್ಯ ಸೇವನೆಯ ಚಟಕ್ಕೆ ಬಿದ್ದಿದ್ದ. ತಾಯಿ ಮನೆಗೆಲಸ ಮಾಡಿ ಸಂಪಾದಿಸುತ್ತಿದ್ದ ಪುಡಿಗಾಸನ್ನೂ ಬಿಡದೆ ಕಸಿದುಕೊಳ್ಳುತ್ತಿದ್ದ. ಇದರಿಂದ ರೋಸಿ ಹೋಗಿದ್ದ ತಾಯಿ ಮಗನನ್ನು ಕೊಲೆ ಮಾಡಲು ತೀರ್ಮಾನಿಸಿದ್ದಳು. ಮಗನನ್ನು ದೇವಾಲಯಕ್ಕೆ ಕರೆದೊಯ್ಯುವ ನೆಪ ಹೇಳಿ ಆಟೋರಿಕ್ಷಾದಲ್ಲಿ ತಾವರೆಕಟ್ಟೆ ಬಳಿ ಕರೆದೊಯ್ದು ದೊಣ್ಣೆಯಿಂದ ಹೊಡೆದಿದ್ದಾಳೆ. ನೆಲಕ್ಕೆ ಬಿದ್ದ ರಮೇಶ್ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.