ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಕುವೆಂಪು ನಗರದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಮನೆಗೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದರು.  
ಮೈಸೂರು

ಬಿಡದಿ ಟೌನ್‌ಶಿಪ್ ಪರ ಬಹುತೇಕ ರೈತರ ಒಲವು

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
ಬಿಡದಿ ಟೌನ್‌ಶಿಪ್ ಯೋಜನೆಗೆ ಕೆಲ ರೈತರು ಮಾತ್ರ ವಿರೋಧ ಮಾಡುತ್ತಿದ್ದು, ಬಹುತೇಕ ರೈತರು ಯೋಜನೆ ಪರ ಇದ್ದಾರೆ. ಹಾಗಾಗಿ ಸರ್ಕಾರ ಸದರಿ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಬಿಡದಿ ಟೌನ್ ಶಿಪ್ ವಿಚಾರವಾಗಿ ಪ್ರತಿಕ್ರಿಯಿಸಿದರು. ಬಿಡದಿ ರೈತರು ಸರ್ಕಾರದಿಂದ ಪರಿಹಾರ ಪಡೆಯುವ ಖುಷಿಯಲ್ಲಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನೋಟಿಫಿಕೇಷನ್ ಮಾಡಿದ್ದರು. ಅದರ ಪ್ರಕಾರ ಸರ್ಕಾರ ಟೌನ್‌ಶಿಪ್ ಮಾಡುತ್ತಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟ ಸರ್ಕಾರದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಯೋಜನೆ ಪರವಾಗಿ ಹೆಚ್ಚಿನ ರೈತರಿದ್ದಾರೆ ಎಂದರು.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಪತ್ರ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾತನಾಡಿ, ಈಗಾಗಲೇ ಇಬ್ಬರು ಪರಸ್ಪರ ಪತ್ರ ಬರೆದಿದ್ದಾರೆ. ಮಾತುಕತೆ ಆಗಬೇಕು ಅಂದರೆ ವಿಧಾನಸೌಧಕ್ಕೆ ಬರಬೇಕು. ಸರ್ಕಾರ ನಡೆಯುವ ಜಾಗದಲ್ಲಿ ಚರ್ಚೆ ಆಗಬೇಕು. ಬೀದಿನಲ್ಲಿ ಕೂತು ಚರ್ಚೆ ಮಾಡಲು ಸಾಧ್ಯವಿಲ್ಲ. ಸಿಎಂ ಸರಿಯಾದ ಸ್ಥಳಕ್ಕೆ ಕರೆದಿದ್ದಾರೆ. ಕುಮಾರಸ್ವಾಮಿಗೆ ವಾದಿಸುವ ಶಕ್ತಿ ಇದ್ದರೆ ಮುಖ್ಯಮಂತ್ರಿಗಳು ಹೇಳಿರುವ ಜಾಗಕ್ಕೆ ಬರಲಿ ಎಂದು ಸವಾಲು ಹಾಕಿದರು.
ಸಾರ್ವಜನಿಕರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಭಾನುವಾರ ಸಭೆ ಆಯೋಜಿಸಲಾಗಿದೆ. ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಎಸ್‌ಐಆರ್ ಮಾಡುತ್ತಿದೆ. ಹೊಸ ಹೊಸ ಮತದಾರರನ್ನು ಸೇರಿಸುವ ಕೆಲಸ ಆಗಬೇಕಿತ್ತು. ಆದರೆ, ಹೆಚ್ಚಾಗಿ ಮತದಾರರನ್ನ ಡಿಲೀಟ್ ಮಾಡಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಅಂದರೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಮತದಾನದ ಹಕ್ಕನ್ನು ಜನರೇ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಕೂಡ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು.

ದೇವನೂರು ಮಹಾದೇವಗೆ ಪುಸ್ತಕ ಕೊಡುಗೆ

ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಕುವೆಂಪು ನಗರದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಮನೆಗೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿಯ ಎರಡು ಸಂಪುಟ ಪುಸ್ತಕವನ್ನು ದೇವನೂರು ಮಹಾದೇವ ಅವರಿಗೆ ನೀಡಿದರು. ಬಳಿಕ ಕೆಲವೊತ್ತು ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಚರ್ಚಿಸಿದರು.