ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೈಸೂರು ಮುಖ್ಯ ರಸ್ತೆಯಲ್ಲಿ ಟೋಲ್ ಪ್ಲಾಜಾ
ತಿ.ನರಸೀಪುರ : ತಾಲೂಕಿನ ಯಡದೊರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೈಸೂರು ಮುಖ್ಯ ರಸ್ತೆಯಲ್ಲಿ ಟೋಲ್ ಪ್ಲಾಜಾವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮವನ್ನು ಉಲ್ಲಂಸಿ ತೆರೆಯಲಾಗಿದ್ದು, ವಿನಾಯಿತಿಯಿದ್ದರೂ ಸ್ಥಳೀಯರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
ಚತುಷ್ಪಥ ರಸ್ತೆ, ಸರ್ವೀಸ್ ರೋಡ್ ನಿರ್ಮಿಸದೆ ಹಾಗೂ ನಾಗರಿಕ ಮೂಲ ಸೌಕರ್ಯಗಳನ್ನು ಕಲ್ಪಿಸದೆ ರಾಷ್ಟ್ರೀಯ ಹೆದ್ದಾರಿ 766ರ ಜಂಕ್ಷನ್‌ನಲ್ಲಿ ಯಡದೊರೆ ಟೋಲ್ ಅನ್ನು ಅನಧಿಕೃತ, ಅಕ್ರಮವಾಗಿ ತೆರೆಲಾಗಿದೆ. ಕೇರಳ ರಾಜ್ಯದ ಕ್ಯಾಲಿಕಟ್‌ವರೆಗೆ ಈ ಹೆದ್ದಾರಿ ಸಂಪರ್ಕ ಕಲ್ಪಿಸಲಿದ್ದು, ನಂಜನಗೂಡು, ಗುಂಡ್ಲುಪೇಟೆ, ಮೈಸೂರು, ತಿ.ನರಸೀಪುರ ಹಾಗೂ ಕೊಳ್ಳೇಗಾಲಕ್ಕೆ ಇದು ಸಂಪರ್ಕ ಕಲ್ಪಿಸಲಿದೆ. ಸದರಿ ಹೆದ್ದಾರಿಯಲ್ಲಿಯೇ 58 ಕಿ.ಮೀ ಅಂತರದಲ್ಲಿ ಗಡಿಭಾಗದ ಕಣ್ಣೇಗಾಲ ಹಾಗೂ ಕಡಕೋಳ ಸಮೀಪದ ಕೆ.ಎನ್.ಹುಂಡಿಯಲ್ಲೂ ಟೋಲ್ ಕೇಂದ್ರಗಳನ್ನು ತೆರೆದು ವಸೂಲಿ ಮಾಡಲಾಗುತ್ತಿದೆ.
ದೇಶದಾದ್ಯಂತ ಕೇಂದ್ರ ಸರ್ಕಾರ ನಾಲ್ಕು ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮೈಸೂರು ಸಂಸ್ಥಾನದ ರಾಜರು ನಿರ್ಮಿಸಿದ ಮೈಸೂರು ಮುಖ್ಯ ರಸ್ತೆ ರಾಜ್ಯ ಹೆದ್ದಾರಿಯಾಗಿತ್ತು. ಆ ಬಳಿಕ ಅದನ್ನು 1989ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿದ ಕೇಂದ್ರ ಸರ್ಕಾರ 212ರ ಹೆದ್ದಾರಿ ಜಂಕ್ಷನ್ ಅನ್ನು 766 ಸಂಖ್ಯೆಗೆ ಪರಿವರ್ತಿಸಿ, ಸಾರ್ವಜನಿಕ ಅನುದಾನಿತ ರಸ್ತೆ ಯೋಜನೆಯಡಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿ 2019ರ ಡಿಸೆಂಬರ್‌ನಲ್ಲಿ ಯಡದೊರೆಯಲ್ಲಿ ಟೋಲ್ ತೆರೆದು ಸುಂಕ ವಸೂಲಿ ಆರಂಭಿಸಿದೆ. 277 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ 117 ಕಿ.ಮೀ ಉದ್ದದ ಕೇರಳ ರಾಜ್ಯದ ರಸ್ತೆಯಲ್ಲಿ ಯಾವೊಂದು ಟೋಲ್ ಇಲ್ಲ. 155 ಕಿ. ಮೀ ಇರುವ ರಾಜ್ಯದ ಹೆದ್ದಾರಿ ರಸ್ತೆಯಲ್ಲಿ ಮೂರು ಟೋಲ್ ಕೇಂದ್ರಗಳನ್ನು ತೆರೆಯಲಾಗಿದೆ.
ನಿಯಮಗಳ ಪ್ರಕಾರ ಒಂದು ಟೋಲ್ನಿಂದ ಮತ್ತೊಂದು ಟೋಲ್ ನಡುವೆ 60 ಕಿಲೋಮೀಟರ್ ಅಂತರವಿರಬೇಕು. ನಗರ ಅಥವಾ ಪಟ್ಟಣ ಪ್ರದೇಶದ ಸ್ಥಳೀಯ ಸಂಸ್ಥೆಗಳ 10 ಕಿ.ಮೀ ವ್ಯಾಪ್ತಿಯಲ್ಲಿ ಟೋಲ್, ವಸೂಲಿಗೆ ನಿರ್ಬಂಧವಿದೆ. 30 ಕಿ.ಮೀ ವ್ಯಾಪ್ತಿಯಲ್ಲಿನ ಸ್ಥಳೀಯರ ವಾಹನ ಸವಾರರಿಗೆ ವಿನಾಯಿತಿ ನೀಡಬೇಕೆಂಬ ನಿಯಮವಿದೆ. ನಿಯಮಗಳನ್ನು ರೂಪಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಂಧ್ರ ಮೂಲದ ವ್ಯಕ್ತಿಗೆ ಟೋಲ್ ಗುತ್ತಿಗೆಯನ್ನು ನೀಡಿ ಹಗಲು ದರೋಡೆಗೆ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಾಹನಗಳ ಮಾಲೀಕರು ಹಾಗೂ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.