ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರಿನಲ್ಲಿ ನೈತಿಕ ಪೊಲೀಸ್‌ಗಿರಿ : 40 ಸಾವಿರ ದೋಚಿದ ಖದೀಮರು

ಮೈಸೂರು: ಲಾಡ್ಜ್‌ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಆರು ಜನರ ಗುಂಪೊಂದು ಲಾಡ್ಜ್ ಸಿಬ್ಬಂದಿಯಿಂದ ಹಣ ಕಸಿದಿರುವುದು ಬೆಳಕಿಗೆ ಬಂದಿದೆ.
ನಗರದ ದೇವೆಗೌಡ ಸರ್ಕಲ್ ಬಳಿಯ ಹೈವೇ ಇನ್ ಲಾಡ್ಜ್‌ನಲ್ಲಿ ರೂಮ್‌ಬಾಯ್ ಆಗಿ ಕಾರ್ಯನಿರ್ವಹಿಸುತ್ತಿರುವ ಜೆ.ಆರ್. ನಾಗರಾಜು ಎಂಬವರೇ ಹಣ ಕಳೆದುಕೊಂಡವರು. ಹೈವೇ ಇನ್ ಲಾಡ್ಜ್‌ಗೆ ಮೇ 24 ರಂದು ಮಹಿಳೆಯೊಬ್ಬರು ಆಗಮಿಸುತ್ತಾರೆ. ಅವರ ಆಧಾರ್ ಕಾರ್ಡ್‌ನ ವಿವರವನ್ನು ಪಡೆದ ನಾಗರಾಜ್ ಅವರಿಗೆ ರೂಂ ನೀಡಿದ್ದರು.
‘ನನ್ನನ್ನು ನೋಡಲು ವ್ಯಕ್ತಿಯೊಬ್ಬರು ಬರುತ್ತಾರೆ, ಅವರು ಬಂದರೆ ಕಳುಹಿಸಿಕೊಡು’ ಎಂದು ಮಹಿಳೆಯು ನಾಗರಾಜ್‌ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಭೇಟಿಯಾಗಲು ಆಗಮಿಸಿದ ವ್ಯಕ್ತಿಯನ್ನು ಆಕೆ ಇರುವ ಕೊಠಡಿಗೆ ನಾಗರಾಜು ಕಳುಹಿಸಿಕೊಟ್ಟ. ಈ ಸಂದರ್ಭ ಲಾಡ್ಜ್‌ಗೆ ಆಗಮಿಸಿದ 6 ಜನರ ಗುಂಪೊಂದು ‘ತಲೆ ಹಿಡಿಯುವ ಕೆಲಸ ಮಾಡುತ್ತಿದ್ದೀಯಾ’ ಎಂದು ನಾಗರಾಜುಗೆ ಬೈದು, ಬೆದರಿಸಿ ಕ್ಯಾಷ್ ಕೌಂಟರ್‌ನಲ್ಲಿದ್ದ 14000 ರೂ.ಗಳನ್ನು ಬಲವಂತವಾಗಿ ಪಡೆದರು. ನಂತರ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ನಾಗರಾಜು ಅವರು ತಮ್ಮ ಸ್ನೇಹಿರ ಬಳಿಯಿಂದ ಒಟ್ಟು 30 ಸಾವಿರ ರೂ.ಗಳನ್ನು ಫೋನ್‌ಪೇ ಮೂಲಕ ಪಡೆದುಕೊಂಡರು. ನಂತರ ನಾಗರಾಜು ಅವರ ಫೋನ್‌ಪೇನಿಂದ ಮೂವರು ಆರೋಪಿಗಳಿಗೆ ಕ್ರಮವಾಗಿ 10,000 ರೂ., 10,500 ರೂ. ಹಾಗೂ 10,000 ರೂ.ಗಳನ್ನು ಕಳುಹಿಸಲಾಗಿದೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.