ಮೂಗೂರು ಕೆಪಿಎಸ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಹಾಗೂ ಸಾಹಿತಿ ಹನಗಳ್ಳಿ ಸೋಮಶೇಖರ್ ಹಾಗೂ ಗಣ್ಯರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಿದ್ದಪ್ಪ, ಎಂ.ರಂಗಸ್ವಾಮಿ,ಕ ಪುಟೇಶ್, ಮಹೇಶ್, ಕೇಶವ್ ಇದ್ದರು.
ಮೂಗೂರು: 70ನೇ ಕನ್ನಡ ರಾಜ್ಯೋತ್ಸವವನ್ನು ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ವತಿಯಿಂದ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಮೂಗೂರು ಕೆಪಿಎಸ್ ಪ್ರೌಢಶಾಲೆಯ ವಿಭಾಗದ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಹಾಗೂ ಸಾಹಿತಿ ಹನಗಳ್ಳಿ ಸೋಮಶೇಖರ್ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ನಂತರ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಮಾತನಾಡಿ, ಕನ್ನಡ ಭಾಷೆಯ ಅಭಿಮಾನ ಎಲ್ಲರಲ್ಲೂ ಮೂಡಬೇಕಾದರೆ ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕನ್ನಡತನವನ್ನು ಬಾಲ್ಯದಲ್ಲೇ ಬಿತ್ತಬೇಕು. ಸರಳ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಇರಬೇಕು. ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಕೊಡುವುದರ ಮೂಲಕ ಭಾಷಾ ಬೆಳವಣಿಗೆಗೆ ಕನ್ನಡಿಗರಾದ ನಾವು ಕನ್ನಡದ ಕಟ್ಟಾಭಿಮಾನಿಗಳಾಗಬೇಕು ಎಂದರು.
ಸಾಹಿತಿ ಸೋಮಶೇಖರ್ ಮಾತನಾಡಿ, ಶರಣರು ಹುಟ್ಟಿ, ಬೆಳೆದು, ಓಡಾಡಿದ ನೆಲದಲ್ಲಿ ಕನ್ನಡತನವನ್ನು ಮೆರೆಯುತ್ತಿದ್ದೇವೆ. ಮಹನಿಯರೀಗೆ ಗೌರವ ಕೊಡುವ ರೀತಿಯಲ್ಲಿ ನಾವೆಲ್ಲರೂ ಬದುಕು ಕಟ್ಟಿಕೊಳ್ಳಬೇಕಿದೆ. ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲ, ಭಾಷೆಗೆ ಧಕ್ಕೆ ಬಂದಾಗ ಒಗ್ಗಟ್ಟಿನಿಂದ ಹೋರಾಡುವ ಮನಸ್ಥಿತಿಯನ್ನು ಹೊಂದಬೇಕು. ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸಲು ನಾವೆಲ್ಲರೂ ಮುನ್ನಡೆಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಸಿದ್ದಪ್ಪ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಂ.ರಂಗಸ್ವಾಮಿ, ಸದಸ್ಯ ಪುಟೇಶ್, ಮಹೇಶ್, ಕೇಶವ್ ಮಾದೇಶ್, ರಮೇಶ್‌ಕುಮಾರ್ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
ನಂತರ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿಸಲಾಯಿತು.