ಹನಗೋಡು ಹೋಬಳಿಯ ದಾಸನಪುರದಲ್ಲಿ ಹಾನಿಗೊಳಗಾದ ಶಾಲಾಕಟ್ಟಡವನ್ನು ಶಾಸಕ ಹರೀಶ್‌ಗೌಡ ಶುಕ್ರವಾರ ವೀಕ್ಷಿಸಿದರು. ತಹಸೀಲ್ದಾರ್ ಮಂಜುನಾಥ್, ಇಒ ಹೊಂಗಯ್ಯ, ಬಿಇಒ ಮಹದೇವ್, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಕಂದಾಯ ನಿರೀಕ್ಷಕ ನಂದೀಶ್ ಇತರರು ಇದ್ದರು.  
ಮೈಸೂರು

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಭೇಟಿ

ಎ. ಆರ್. ರಘುರಾಮ
ಹನಗೋಡು : ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಿಂದಾಗಿ ಹಾನಿಗೀಡಾಗಿರುವ ಹನಗೋಡು ಹೋಬಳಿಯ ದಾಸನಪುರದ ಶಾಲಾ ಕೊಠಡಿ ಹಾಗೂ ಮನೆಗಳನ್ನು ಶಾಸಕ ಜಿ.ಡಿ.ಹರೀಶ ಗೌಡ
ಶುಕ್ರವಾರ ವೀಕ್ಷಿಸಿದರು.
ಹುಣಸೂರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾದರು. ಬಿರುಗಾಳಿಯಿಂದ ಹಾನಿಗೀಡಾಗಿರುವ
ಶಾಲೆಗೆ ಭೇಟಿ ನೀಡಿದ್ದ ಅವರು ಎರಡೂ ಶಾಲಾ ಕೊಠಡಿಗಳನ್ನು ವೀಕ್ಷಿಸಿದರು. ಶಿಥಿಲಗೊಂಡಿರುವ
ಇವುಗಳನ್ನು ಕೆಡವಿ ಹೊಸದಾಗಿ ಕೊಠಡಿ ನಿರ್ಮಿಸಲು ಶಾಸಕರ ನಿಧಿಯಿಂದ 25 ಲಕ್ಷ ರೂ ಮಂಜೂರು ಮಾಡಿದರು. ಸ್ಥಳದಲ್ಲೇ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದು
ಗಮನ ಸೆಳೆಯಿತು. ಮಳೆ ಮುನ್ಸೂಚನೆ ಅರಿತು ಮುಂಜಾಗ್ರತೆ ಕ್ರಮವಹಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳಿಸಿದ ಶಿಕ್ಷಕಿಯರಾದ ಸುಮಾ ಮತ್ತು ಉಮಾ ಅವರನ್ನು ಶಾಸಕರು ಅಭಿನಂದಿಸಿದರು.
22 ಹೊಸ ಮನೆ ಮಂಜೂರು: ನಂತರ ಗ್ರಾಮದಲ್ಲಿ ಹಾನಿಗೀಡಾದ ಎಲ್ಲ ಮನೆಗಳಿಗೂ ಭೇಟಿ ನೀಡಿ ಮಾಹಿತಿ ಪಡೆದು ನೊಂದ ಜನರನ್ನು ಶಾಸಕರು ಸಂತೈಸಿದರು. ದಾಸನಪುರದ ಸಂತ್ರಸ್ತರಿಗೆ 22 ಮನೆಗಳನ್ನು ಸ್ಥಳದಲ್ಲೇ ಮಂಜೂರು ಮಾಡಿದರು.
ಕ್ಷೇತ್ರತ ಇತರ ಗ್ರಾಮಗಳಲ್ಲೂ ಹಾನಿಯಾಗಿರುವ ಮನೆಗಳ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅವರಿಗೂ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಗಾಳಿಗೆ ಹೆಂಚು, ತಗಡು ಹಾರಿ ಹೋದ ಮನೆಗಳಿಗೆ ಅಗತ್ಯ ವಸ್ತುಗಳನ್ನು, ಮರಮುಟ್ಟು ಮತ್ತು ಕಲ್ನಾರು ಶೀಟ್‌ಗಳನ್ನು ವೈಯಕ್ತಿಕವಾಗಿ ಕೊಡಿಸುವ ಭರವಸೆ ನೀಡಿದರು.
ಹಾನಿ ವರದಿಗೆ ಸೂಚನೆ: ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ತಾಲೂಕಿನ ಹಲವೆಡೆ ಬಿರುಗಾಳಿ ಮಳೆಗೆ ಬಾಳೆ, ತೆಂಗು,ಅಡಿಕೆ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸುವಂತೆ ಹಾಗೂ ಸೂಕ್ತ ಪರಿಹಾರ ಸಿಗುವಂತೆ ಕ್ರಮವಹಿಸಬೇಕೆಂದು ತಹಸೀಲ್ದಾರ್ ಜೆ.ಮಂಜುನಾಥ್, ತಾ.ಪಂ.ಇಒ ಹೊಂಗಯ್ಯ, ತೋಟಗಾರಿಕೆಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗರಾಜ್ ಅವರಿಗೆ ಶಾಸಕರು ಸೂಚಿಸಿದರು.
ಸೆಸ್ಕ್ ಇಂಜಿನಿಯರ್‌ಗೆ ತರಾಟೆ:
ಹನಗೋಡು ವಿದ್ಯುತ್‌ಕೇಂದ್ರದ ಕಿರಿಯ ಇಂಜಿನಿಯರ್ ಸುನಿಲ್ ಕಾರ್ಯವೈಖರಿ ಬಗ್ಗೆ ರೈತರು ದೂರಿನ ಸುರಿಮಳೆಗೈದಾಗ, ವರ್ತನೆ ಸರಿಪಡಿಸಿಕೊಳ್ಳಬೇಕೆಂದು ಶಾಸಕರು ತರಾಟೆಗೆ ತೆಗೆದುಕೊಂಡರು. ದಾಸನಪುರ ಭಾಗದ ಲೈನ್ ಮನ್ ಗಳನ್ನು ತಕ್ಷಣವೇ ಬದಲಾಯಿಸುವಂತೆ ಎಇಇಗೆ ನಿರ್ದೇಶಿಸಿದರು. ಇದೇ ವೇಳೆ ಕಿರಂಗೂರು ಪಿಡಿಒ ಭವ್ಯಾ ಅವರ ವಿರುದ್ಧವೂ
ಜನರಿಂದ ದೂರು ಬಂದವು. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಅವರು ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದರು.
ಈ ಸಂದರ್ಭ ತಹಸೀಲ್ದಾರ್ ಜೆ.ಮಂಜುನಾಥ್, ತಾಪಂ ಇಒ ಹೊಂಗಯ್ಯ, ಬಿಇಒ ಮಹದೇವ್, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಕಂದಾಯ ನಿರೀಕ್ಷಕ ನಂದೀಶ್, ಗ್ರಾಮ ಲೆಕ್ಕಿಗ ಕುಮಾರ್, ಶಿಕ್ಷಣ ಸಂಯೋಜಕ ಕೇಶವಮೂರ್ತಿ, ಸಿಆರ್‌ಪಿಗಳಾದ ಶ್ರೀನಿವಾಸಮೂರ್ತಿ, ಅಶ್ವಿನಿ, ಎಪಿಎಂಸಿ ಮಾಜಿಅಧ್ಯಕ್ಷರಾದ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಶ್, ತಾಲೂಕು ಜೆಡಿಎಸ್‌ಅಧ್ಯಕ್ಷ ಎಂ ಬಿ.ಸುರೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಮುಖಂಡರಾದ ಸತೀಶ್‌ಪಾಪಣ್ಣ, ಅಣ್ಣಯ್ಯ, ರಾಜೇಗೌಡ ಮತ್ತು ಗ್ರಾಮಸ್ಥರು ಇದ್ದರು.