ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಇಂಧನ ಉಳಿತಾಯದ ಭಾಗವಾಗಿ ಶುಕ್ರವಾರದಿಂದ ಎಲೆಕ್ಟ್ರಿಕ್ ಸ್ಕೂಟರ್ ಬಳಸಲು ಆರಂಭಿಸಿರುವುದು.
- ಪೆಟ್ರೋಲ್ ಮತ್ತು ಡೀಸೆಲ್ ಬಳಕೆ, ಚಿನ್ನ ಖರೀದಿ ಕಡಿಮೆ ಮಾಡುವಂತೆ ನರೇಂದ್ರ ಮೋದಿ ಕರೆಗೆ ಸ್ಪಂದನೆ
- ಸಿಎಂ ಸಿದ್ದರಾಮಯ್ಯ ಅವರು ಕೂಡ ಇದಕ್ಕೆ ಸಹಕರಿಸಬೇಕು ಎಂದು ಮನವಿ
ಮೈಸೂರು:ಇಂಧನ ಉಳಿಸಿ ಎಂದು ಪ್ರಧಾನಿ ನರೇಂದ್ರಮೋದಿ ನೀಡಿರುವ ಕರೆಗೆ ಓಗೊಟ್ಟಿರುವ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಕಾರು ಬಿಟ್ಟು, ಎಲೆಕ್ಟ್ರಿಕ್ ಸ್ಕೂಟರ್ ಬಳಸಲು ಆರಂಭಿಸಿದ್ದಾರೆ.
ವಿದೇಶಿ ವಿನಿಮಯ ಉಳಿಸಲು ನಿತ್ಯ ಜೀವನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ, ಚಿನ್ನ ಖರೀದಿ ಕಡಿಮೆ ಮಾಡುವಂತೆ ಮೋದಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದರು. ಅದರಂತೆ ಬಿಜೆಪಿ ಶಾಸಕರೂ ಅಗಿರುವ ಟಿ.ಎಸ್. ಶ್ರೀವತ್ಸ ತಮ್ಮ ದಿನನಿತ್ಯದ ಸಂಚಾರಕ್ಕೆ ಕಾರು ಬಳಕೆ ಬಿಟ್ಟು ಎಲೆಕ್ಟ್ರಿಕ್ ಸ್ಕೂಟರ್ ಬಳಸುವ ಮೂಲಕ ಶೇ. 90ರಷ್ಟು ಇಂಧನ ಬಳಕೆ ಕಡಿತಗೊಳಿಸಲು ಮುಂದಾಗಿದ್ದಾರೆ.
ತಮ್ಮ ಸ್ಥಳೀಯ ಕೆಲಸ ಕಾರ್ಯಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ಕಾರು ಬಳಸಲು ಶುಕ್ರವಾರದಿಂದಲೇ ಆರಂಭಿಸಿರುವ ಅವರು, ನಾಗರಿಕರು ಸಮೂಹ ಸಾರಿಗೆ ಬಳಸಬೇಕು ಎಂದು ಕೋರಿದರು.
ಮುಖ್ಯಮಂತ್ರಿಯೂ ಸಹಕರಿಸಬೇಕು:
ಸಂಕಷ್ಟ ಬಂದಾಗ ದೇಶದ ಒಟ್ಟಿಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ. ಹಾಗಾಗಿ ಕಾರ‌್ಯಕರ್ತರು ನೀಡಿದ ಎಲೆಕ್ಟ್ರಿಕ್ ಕಾರು ಹಾಗೂ ಸ್ಕೂಟರ್ ಬಳಸಲು ನಿರ್ಧರಿಸಿದ್ದೇನೆ. ಕೆಲವೊಮ್ಮೆ ಬೆಂಗಳೂರಿಗೆ ಹೋಗಲು ಎಲೆಕ್ಟ್ರಿಕ್ ಬಸ್ ಬಳಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಇದಕ್ಕೆ ಸಹಕರಿಸಬೇಕು ದೇಶಕ್ಕಿಂತ ಯಾರೂ ದೊಡ್ಡವರಿಲ್ಲ ಎಂಬ ಸಂದೇಶ ಸಾರಬೇಕು ಎಂದರು.