ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕ ದರ್ಶನ್ ಧ್ರುವನಾರಾಯಣ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ
- ಶಾಸಕರ ದಿಢೀರ್ ಭೇಟಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಬ್ಬಿಬ್ಬು
ನಂಜನಗೂಡು : ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ಶಾಸಕ ದರ್ಶನ್ ಧ್ರುವನಾರಾಯಣ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಶಾಸಕರ ದಿಢೀರ್ ಭೇಟಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಬ್ಬಿಬ್ಬಾಗಿ ನಿಂತರು. ಶಾಸಕರು, ನೇರವಾಗಿ ಶೌಚಗೃಹ, ಔಷಧ ಉಗ್ರಾಣ, ಶುದ್ಧೀಕರಿಸಿದ ವಸ್ತುಗಳ ಕೊಠಡಿ, ಮಕ್ಕಳ ಲಸಿಕಾ ವಿಭಾಗ, ಆಡಳಿತ ವೈದ್ಯಾಧಿಕಾರಿಗಳ ಕಚೇರಿ, ಸ್ವಾಗತ ಮತ್ತು ನೋಂದಣಿ ವಿಭಾಗ, ಮಕ್ಕಳ ತುರ್ತು ಚಿಕಿತ್ಸಾ ಕೇಂದ್ರ ಸೇರಿದಂತೆ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಕಂಡು ಹಾರಿಹಾಯ್ದರು. ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರಿಂದ ಮಾಹಿತಿಯನ್ನು ಕಲೆ ಹಾಕಿದ ಶಾಸಕರು, ವೈದ್ಯರು ಮತ್ತು ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಸರಿಯಾಗಿ ರಿಜಿಸ್ಟರ್ ಪುಸ್ತಕವನ್ನು ನಿರ್ವಹಣೆ ಮಾಡುತ್ತಿಲ್ಲ. ಶೌಚಗೃಹಗಳನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ರಾತ್ರಿ ಪಾಳಿಯಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಅವಧಿ ಮುಗಿದ ಔಷಧಗಳನ್ನು ವಿತರಣೆ ಮಾಡುತ್ತಿರುವುದನ್ನು ಕಂಡು ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು. ಹೆರಿಗೆ ಆಸ್ಪತ್ರೆಯಲ್ಲಿ ಕೆಲವೊಂದು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಕುಡಿಯುವ ನೀರನ್ನು ಬದಲಾವಣೆ ಮಾಡುವಂತೆ ಸೂಚಿಸಿದ್ದೇನೆ. ರಾತ್ರಿ ಸಮಯದಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಜನರೊಂದಿಗೆ ಸ್ಪಂದಿಸುತ್ತಿಲ್ಲ ಎಂಬುದೂ ತಿಳಿದು ಬಂದಿದೆ. ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಶೀಘ್ರವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣ ಆಸ್ಪತ್ರೆಯ ಪಕ್ಕದಲ್ಲಿರುವುದರಿಂದ ಕೆಲಸಗಳಿಗೆ ಹೋಗುವ ಜನರು ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದರಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗುತ್ತದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಸೆಕ್ಯೂರಿಟಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ವೀಣಾ ಸಿಂಗ್, ಡಾ.ಇರ್ಫಾನಿ, ಡಾ.ಯಶವಂತ್ ಸೇರಿದಂತೆ ಇತರರು ಇದ್ದರು.