ಶಾಸಕ ಕೆ.ಹರೀಶ್ ಗೌಡ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಶ್ವಿನಿ, ಗಿರೀಶ್, ಪೈಲ್ವಾನ್ ಶ್ರೀನಿವಾಸ್, ಕೃಷ್ಣೇಗೌಡ ಇತರರಿದ್ದರು. 
ಮೈಸೂರು

ಹೆಬ್ಬಾಳು ಲೋಕನಾಯಕ ನಗರದಲ್ಲಿ 5 ಕೋಟಿ ವೆಚ್ಚದ ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಹರೀಶ್ ಗೌಡ

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 50 ಕೋಟಿ ರೂ. ಅನುದಾನದಲ್ಲಿ ಹೆಬ್ಬಾಳು ಲೋಕನಾಯಕನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಕೆ. ಹರೀಶ್‌ಗೌಡ ಗುರುವಾರ ಪರಿಶೀಲಿಸಿದರು.
ವಲಯ ಕಚೇರಿ-5ರ ಹೆಬ್ಬಾಳು ಲೋಕನಾಯಕನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ, ಚರಂಡಿ ಸೇರಿದಂತೆ ನಾಗರಿಕ ಕಾಮಗಾರಿಗಳು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು.
ಕೆಲ ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದ ಕಾಮಗಾರಿಗಳ ಪೈಕಿ ಪೂರ್ಣಗೊಂಡಿರುವ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಗುಣಮಟ್ಟವನ್ನು ಸ್ಥಳದಲ್ಲೇ ಪರಿಶೀಲಿಸಿದರು. ರಸ್ತೆ ಮಧ್ಯದಲ್ಲಿರುವ ಯಂತ್ರಗುಂಡಿಗಳು ತಗ್ಗಿನಲ್ಲಿರುವುದನ್ನು ಗಮನಿಸಿದ ಅವರು, ಅವುಗಳನ್ನು ರಸ್ತೆ ಮಟ್ಟಕ್ಕೆ ಏರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಅಗತ್ಯವಿರುವ ಕಡೆ ಚರಂಡಿಗಳಿಗೆ ಸೂಕ್ತ ಇಳಿಜಾರು ಕಲ್ಪಿಸುವಂತೆ ನಿರ್ದೇಶನ ನೀಡಿದರು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಬಳಿಕ ಸ್ಥಳೀಯ ಸ್ಮಶಾನದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ವಾರ್ಡ್‌ನಲ್ಲಿ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳ ವಿವರ ಪಡೆದುಕೊಂಡರು. ಅಗತ್ಯವಿರುವ ಕಾಮಗಾರಿಗಳಿಗೆ ತಗಲುವ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದರು.
ನಂತರ ಕುಂಬಾರಕೊಪ್ಪಲು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಹರೀಶ್‌ಗೌಡ, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಕಾಲೇಜಿನಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಅಗತ್ಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.
ಇಂಜಿನಿಯರ್‌ಗಳಾದ ಅಶ್ವಿನಿ, ಗಿರೀಶ್, ಮಾಜಿ ಪಾಲಿಕೆ ಮಾಜಿ ಸದಸ್ಯ ಪೈಲ್ವಾನ್ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ಕೃಷ್ಣೇಗೌಡ ಇತರರಿದ್ದರು.