ಕನಕಗಿರಿ ಸರ್ಕಾರಿ ಶಾಲೆಯ ಛಾವಣಿ ಗಾರೆ ಕುಸಿದು ಬಿದ್ದ ಸ್ಥಳವನ್ನು ಟಿ.ಎಸ್.ಶ್ರೀವತ್ಸ ಪರಿಶೀಲಿಸಿದರು. ಕೃಷ್ಣ, ವಾಣೀಶ್, ಚೇತನ್ , ಪ್ರದೀಪ್‌ಕುಮಾರ್ ಇತರರು ಇದ್ದರು.
- ಛಾವಣಿಯ ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಶೀಟ್ ಅಳವಡಿಸಲಾಗುವುದು
- ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಅನುದಾನ
ಮೈಸೂರು: ಕನಕಗಿರಿ ಸರ್ಕಾರಿ ಶಾಲೆಯ ಛಾವಣಿ ಗಾರೆ ಕುಸಿದು ಬಿದ್ದ ಸ್ಥಳವನ್ನು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಪರಿಶೀಲಿಸಿ, ದುರಸ್ತಿಗೆ ಬೇಕಾದ ಅಗತ್ಯ ಅನುದಾನ ನೀಡುವುದಾಗಿ ತಿಳಿಸಿದರು.
ಶಾಲೆಯ ಭಾಗದ ಚಿಪ್ಪುಗಳು ಕಳಚಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಇಒ ಕೃಷ್ಣ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಈಗಾಗಲೇ ಸಾಕಷ್ಟು ತರಗತಿ ಕೊಠಡಿಗಳು ಲಭ್ಯವಿರುವುದರಿಂದ, ಹಾನಿಗೊಳಗಾದ ಛಾವಣಿಯ ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಶೀಟ್ ಅಳವಡಿಸುವ ಮೂಲಕ ಅದನ್ನು ಉತ್ತಮ ರೀತಿಯ ಊಟದ ಹಾಲ್ ಅಥವಾ ಸಭಾಂಗಣವಾಗಿ ಪರಿವರ್ತಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಈ ಸಂಬಂಧ ಬುಧವಾರ ಶಾಲಾ ಅಭಿವೃದ್ಧಿ ಮಂಡಳಿ ಸಭೆ ಕರೆಯಲಾಗುವುದು. ಡಿಡಿಪಿಐ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರನ್ನು ಆಹ್ವಾನಿಸಿ, ಕಟ್ಟಡದ ಸ್ಥಿತಿ, ಹೊಣೆಗಾರಿಕೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು. ಆದ್ದರಿಂದ ಸಭೆಗೆ ಸಿದ್ಧ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಈ ಕಾಮಗಾರಿಗೆ ಸುಮಾರು 5 ರಿಂದ 7 ಲಕ್ಷ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದ್ದು, ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಶಾಸಕರು ಹೇಳಿದರು.
ಮುಖಂಡರಾದ ವಾಣೀಶ್, ಚೇತನ್, ಪ್ರದೀಪ್‌ಕುಮಾರ್, ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಇದ್ದರು.