ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧನಗೈದ ವಿದ್ಯಾರ್ಥಿಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು. ವರ್ಷಾ ಹರೀಶ್‌ಗೌಡ, ಎಂ.ಬಿ.ಸುರೇಂದ್ರ, ಹರವೆ ಶ್ರೀಧರ್, ಗಣೇಶ್ ವಿ.ಭೋವಿ, ವಾಸು, ಪರಮೇಶ್, ಸ್ವಾಮಿಭೋವಿ ಇತರರು ಇದ್ದರು.
ಹುಣಸೂರು : ಸಂಘಟಿತ ಹೋರಾಟ ಮಾಡಿದರೆ ಸಮುದಾಯದ ಪ್ರಗತಿಗೆ ಪೂರಕವಾಗುತ್ತದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲೂಕು ಭೋವಿ ಸಮಾಜ ಅಭಿವೃದ್ಧಿ ಟ್ರಸ್ಟ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣಪುಟ್ಟ ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಸಂಘಟಿತ ಹೋರಾಟ ಇಲ್ಲದಿದ್ದರೆ ಸಮುದಾಯ ಏಳಿಗೆ ಹೊಂದಲು ಸಾಧ್ಯವಿಲ್ಲ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು. ಶಿಕ್ಷಣವೇ ಶಕ್ತಿ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬಲವರ್ಧನೆ ಸಾಧ್ಯವಾಗಲಿದೆ ಎಂದರು.
ಸಹಕಾರ ನೀಡುವೆ: ಮುಖಂಡರ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ಭೂಮಿ ಗುರುತಿಸಿಕೊಡಿಸುವ ಜವಾಬ್ದಾರಿ ನನ್ನದು. ಕಟ್ಟಡ ನಿರ್ಮಾಣಕ್ಕೂ ಸಹಕಾರ ನೀಡುತ್ತೇನೆ ಎಂದು ಹರೀಶ್ ಗೌಡ ಭರವಸೆ ನೀಡಿದರು. ವರ್ಷಾ ಹರೀಶ್‌ಗೌಡ ಮಾತನಾಡಿ, ನಾಡನ್ನು ಕಟ್ಟುವ ಕಾರ್ಯದಲ್ಲಿ ಭೋವಿ ಸಮಾಜದ ಕೊಡುಗೆ ಅನನ್ಯವಾಗಿದೆ ಎಂದರು. ಇದನ್ನು ಮನಗಂಡು ಮೈಸೂರು ಅರಸರು ರಾಜಭೋವಿ ಎಂದೇ ಗೌರವಿಸಿರುವುದು ವಿಶೇಷವಾಗಿದೆ ಎಂದರು.
ಸೌಲಭ್ಯಗಳನ್ನು ಒದಗಿಸಿ: ಟ್ರಸ್ಟ್ ಗೌರವಾಧ್ಯಕ್ಷ ಗಣೇಶ್ ವಿ.ಭೋವಿ ಮಾತನಾಡಿ, ಮೊದಲಬಾರಿಗೆ ಸಮುದಾಯದಿಂದ
ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಶಾಸಕರು ಸಮುದಾಯದ ಬಡ ಕುಟುಂಬಗಳಿಗೆ ನಿವೇಶನ, ವಸತಿ ಮುಂತಾದ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಬೇಕು ಎಂದು ವಿನಂತಿಸಿದರು. ಉಪಾಧ್ಯಕ್ಷ ಸ್ವಾಮಿಭೋವಿ, ಅಧ್ಯಕ್ಷ ವಾಸು, ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ರಮೇಶ್, ಕಾರ್ಯಾಧ್ಯಕ್ಷ ಎಚ್.ವಿ.ಪರಮೇಶ್ ಮಾತ ನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕುಚೇಲ, ಖಜಾಂಚಿ ಮೋಹನ್, ಸಲಹೆಗಾರ ವೆಂಕಟಪತಿ, ಸಂಘಟನಾ ಕಾರ್ಯದರ್ಶಿ ಕಿಟ್ಟಪ್ಪ ಮತ್ತು ನಿರ್ದೇಶಕರು ಹಾಜರಿದ್ದರು.