ನಗರಪಾಲಿಕೆ ವಲಯ ಕಚೇರಿಯಲ್ಲಿ ಶನಿವಾರ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಜಿ.ಎಸ್.ಸೋಮಶೇಖರ್, ಎಸ್.ಮಂಜು, ಆರ್.ಶ್ರೀನಿವಾಸ್, ಸಂದೀಪ್, ಸತ್ಯಮೂರ್ತಿ, ಎಚ್.ಎಂ.ಸುರೇಶ್, ಎಚ್.ಆರ್.ದೀಪಾ, ರವಿಕೀರ್ತಿ, ಎಸ್.ಎಂ.ಸುಜಯಕುಮಾರ್ ಇತರರಿದ್ದರು. 
ಮೈಸೂರು

ನಗರಸಭೆ, ಪಪಂಗಳ ಮಾಹಿತಿ ಸಿದ್ಧವಿರಲಿ: ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ಬೀದಿ ದೀಪಗಳ, ರಸ್ತೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ವರದಿ ತಯಾರಿಸಿಕೊಳ್ಳಬೇಕು.
  • ಮುಂದೆ ಏನೇನು ಕೆಲಸಗಳು ಆಗಬೇಕು, ಸಮಸ್ಯೆಗಳಿಗೆ ಯಾವ ಪರಿಹಾರ ಆಗಬೇಕು ಎಂಬುದನ್ನು ಗಮನಿಸಬೇಕು.
  • ಕಂದಾಯ ವಸೂಲಿ ಮಾಡುವ ಬಗ್ಗೆ ಪ್ರತ್ಯೇಕ ಟಾಸ್ಕ್‌ಫೋರ್ಸ್ ರಚಿಸಬೇಕು
ಮೈಸೂರು: ಮೈಸೂರು ನಗರಪಾಲಿಕೆಯನ್ನು ‘ಗ್ರೇಡ್-ಒನ್’ ಮೇಲ್ದರ್ಜೆಗೆ ಏರಿಸಿ ಯಾವುದೇ ಸಂದರ್ಭದಲ್ಲಾದರೂ ಅಧಿಸೂಚನೆ ಹೊರಡಿಸುವುದರಿಂದ ಈ ವ್ಯಾಪ್ತಿಯ ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿಗಳು ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಪಾಲಿಕೆ ವಲಯ ಕಚೇರಿ ಮೂರಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾಲಿಕೆ ವಲಯ, ನಗರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ‘ಗ್ರೇಡ್-ಒನ್’ ಅಗಿ ಮೈಸೂರು ನಗರಪಾಲಿಕೆಯನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಿದೆ. ಈ ಕುರಿತು ಯಾವುದೇ ಸಂದರ್ಭದಲ್ಲಾದರೂ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದ ಒಂದು ತಿಂಗಳಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬರುವ ಆಸ್ತಿಗಳು, ಬಡಾವಣೆಗಳು ಸೇರಿದಂತೆ ಸಂಪೂರ್ಣ ಮಾಹಿತಿ ತಯಾರಿಸಿ ಸಿದ್ಧವಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳಿಂದ ಪಟ್ಟಣ ಪಂಚಾಯಿತಿ, ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಸುಧಾರಣೆಯಾಗಿವೆ. ಆರಂಭದಲ್ಲಿ ಖಾತೆ ಕೊಡುತ್ತಿಲ್ಲ, ದುಡ್ಡು ಜಾಸ್ತಿ ಕೇಳುತ್ತಿದ್ದಾರೆ, ಕಂದಾಯ ದ್ವಿಗುಣ ಮಾಡಲಾಗಿದೆ, ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿದ್ದವು. ಈಗ ಸಾಕಷ್ಟು ಸುಧಾರಿಸಿ ದೂರುಗಳು ಕಡಿಮೆಯಾಗಿವೆ ಎಂದರು.
‘ಗ್ರೇಡ್-ಒನ್’ ಮೈಸೂರು ನಗರಪಾಲಿಕೆಯನ್ನಾಗಿ ಮಾಡಲು ತೀರ್ಮಾನ ಮಾಡಿರುವುದರಿಂದ ಸರ್ಕಾರ ದಿಢೀರನೇ ಅಧಿಸೂಚನೆ ಹೊರಡಿಸಬಹುದು. ಪ.ಪಂ. ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳು, ಮನೆಗಳು, ಗ್ರಾಮಗಳು, ಬಡಾವಣೆಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು,ಆಸ್ಪತ್ರೆಗಳು ಎಷ್ಟಿವೆ ಎಂಬುದನ್ನು ವರದಿ ಮಾಡಬೇಕು ಎಂದು ಹೇಳಿದರು.
ಅದೇ ರೀತಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ಬೀದಿ ದೀಪಗಳ, ರಸ್ತೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ವರದಿ ತಯಾರಿಸಿಕೊಳ್ಳಬೇಕು. ಈ ಕೆಲಸವಾದರೆ ವಲಯ ಕಚೇರಿ ಸ್ಥಾಪಿಸಿ ಸುಗಮವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿಕೊಂಡು ಮುಂದಿನ ತಿಂಗಳಿಗೆ ಒಂದು ವರ್ಷವಾಗಲಿದೆ. ಇಲ್ಲಿಯವರೆಗೆ ಏನೇನು ಆಗಿದೆ, ಮುಂದೆ ಏನೇನು ಕೆಲಸಗಳು ಆಗಬೇಕು, ಸಮಸ್ಯೆಗಳಿಗೆ ಯಾವ ಪರಿಹಾರ ಆಗಬೇಕು ಎಂಬುದನ್ನು ಗಮನಿಸಬೇಕು. ನಿವೇಶನಗಳು, ಮನೆಗಳಲ್ಲಿ ಎಷ್ಟು ಖಾತೆಗಳಾಗಿವೆ, ಎಷ್ಟು ಬಾಕಿ ಇವೆ ಎಂಬುದರ ಬಗ್ಗೆ ಮ್ಯಾಪ್ ಸಮೇತ ಒಂದು ಸಮಗ್ರ ವರದಿ ಇರಬೇಕು ಎಂದು ನಿರ್ದೇಶನ ನೀಡಿದರು.
ನಗರಪಾಲಿಕೆಗೆ ಹಸ್ತಾಂತರವಾದ ಮೇಲೆ ಅಪಾರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಮುಂದೆ ವಲಯ ಕಚೇರಿಗಳನ್ನು ವಿಸ್ತರಿಸಿ ಅಧಿಕಾರಿಗಳನ್ನು ನೇಮಕ ಮಾಡಿದ ಮೇಲೆ ಯಥಾಸ್ಥಿತಿಯಲ್ಲಿ ಆಡಳಿತ ಸಾಗಬೇಕು. ಜನರಿಗೆ ಎಂದಿನಂತೆ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಮಾಡುವಂತೆ ಮಾಡಬಹುದು ಎಂದು ಸೂಚಿಸಿದರು.
ಕೂಡಲೇ ಟೆಂಡರ್ ಕರೆದು ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಅಭಿವೃದ್ಧಿ ಮಾಡಬೇಕು ಎಂದರು.
ನಗರಪಾಲಿಕೆ ಉಪ ಆಯುಕ್ತರಾದ ಜಿ.ಎಸ್.ಸೋಮಶೇಖರ್, ಎಸ್.ಮಂಜು, ಕಾರ್ಯಪಾಲಕ ಇಂಜಿನಿಯರ್ ಆರ್.ಶ್ರೀನಿವಾಸ್, ವಲಯ-3ರ ಸಹಾಯಕ ಆಯುಕ್ತ ಸಂದೀಪ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಚ್.ಎಂ.ಸುರೇಶ್, ಎಚ್.ಆರ್.ದೀಪಾ, ರವಿಕೀರ್ತಿ, ಎಸ್.ಎಂ.ಸುಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಸಿಡಿಪಿಒ ಸುಬ್ಬಯ್ಯ, ನಗರಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಧನುಷ್, ಮಧುಸೂದನ್, ಮೋಹನಕುಮಾರಿ, ನಾಗರಾಜೇಗೌಡ, ಪಿಆರ್‌ಇಡಿ ಎಇಇ ಮೆಹಬೂಬ್, ನಿರ್ಮಿತಿ ಕೇಂದ್ರದ ಎಇಇ ಶ್ವೇತಾ, ತೋಟಗಾರಿಕೆ ಎಇಇ ಪುನೀತ್‌ಕುಮಾರ್ ಇತರರಿದ್ದರು.
ಮುಖ್ಯಮಂತ್ರಿಗಳಿಂದ ಭರವಸೆ
ಮುಡಾದಿಂದ ನಿರ್ಮಿಸಿದ ಹಾಗೂ ಅನುಮೋದಿಸಿದ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸುವಾಗ ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಡಾವಣೆಗಳಿಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದ್ದು, ಶೀಘ್ರ ಸಭೆ ನಡೆಸಿ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ಬಡಾವಣೆಗಳನ್ನು ಮೂಲಸೌಕರ್ಯ ಕಲ್ಪಿಸದೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗಿದೆ. ಅಂತಹ ಬಡಾವಣೆಗಳಿಗೆ ಆಗಬೇಕಿರುವ ಕೆಲಸಗಳಿಗೆ ಅನುದಾನದ ಕೊರತೆ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಹೇಳಿದ್ದರಿಂದ ಸಚಿವರು ಒಪ್ಪಿದ್ದಾರೆ ಎಂದು ತಿಳಿಸಿದರು.
ಯಾವ, ಯಾವ ಬಡಾವಣೆಗಳಲ್ಲಿ ಏನೇನು ಕೆಲಸಗಳು ಆಗಬೇಕೆಂದು ಪಟ್ಟಿ ತಯಾರಿಸಿದರೆ ಸಚಿವರ ಸಭೆಯಲ್ಲಿ ಮಂಡಿಸಿ ಅನುದಾನ ಬಿಡುಗಡೆಗೆ ಒಪ್ಪಿಗೆ ಪಡೆಯಬಹುದು. ಪೌರಾಯುಕ್ತರು, ಮುಖ್ಯಾಧಿಕಾರಿಗಳು ತಕ್ಷಣವೇ ತಮ್ಮ ವ್ಯಾಪ್ತಿಯಲ್ಲಿ ಹಸ್ತಾಂತರ ಮಾಡಿಕೊಂಡಿರುವ ಬಡಾವಣೆಗಳಿಗೆ ಸಂಬಂಧಿಸಿದ ಪೂರ್ಣ ವಿವರ ಸಿದ್ಧಪಡಿಸಿಕೊಡಬೇಕು. ಅದನ್ನು ಸರ್ಕಾರದ ಗಮನಕ್ಕೆ ತರುವೆ ಎಂದರು.
ಕಂದಾಯ ವಸೂಲಿಗೆ ಟಾಸ್ಕ್‌ಫೋರ್ಸ್
ಕಂದಾಯ ವಸೂಲಿ ಮಾಡುವ ಬಗ್ಗೆ ಪ್ರತ್ಯೇಕ ಟಾಸ್ಕ್‌ಫೋರ್ಸ್ ರಚಿಸಬೇಕು. ನಗರಪಾಲಿಕೆಗೆ ಸೇರ್ಪಡೆಗೊಂಡರೆ ಮುಂದೆ ಏನೇನು ಅನುಕೂಲವಾಗಲಿದೆ, ಕಂದಾಯ ಎಷ್ಟಾಗಲಿದೆ ಎನ್ನುವ ಮಾಹಿತಿ ನೀಡುವಂತೆ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಗ್ರಾಮಗಳು, ಬಡಾವಣೆಗಳಿಗೆ ಹೋದಾಗ ಸ್ಥಳೀಯ ಜನರನ್ನು ಸೇರಿಸಿ ಮುಂದೆ ನಗರಪಾಲಿಕೆಗೆ ಸೇರಿಕೊಳ್ಳುತ್ತದೆ, ಅಲ್ಲಿಯವರೆಗೆ ಕಂದಾಯ ಪಾವತಿಸಿ ಅಪ್‌ಡೇಟ್ ಮಾಡಿಸಿಕೊಳ್ಳಬೇಕು. ಪಾಲಿಕೆಗೆ ಸೇರಿದ ಮೇಲೆ ಕಂದಾಯ ದ್ವಿಗುಣವಾಗಲಿದೆ. ಕಂದಾಯದಲ್ಲೂ ಏರಿಕೆಯಾಗಲಿದೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕಂದಾಯ ಬಾಕಿ ಉಳಿಸಿಕೊಂಡರೆ ಹಸ್ತಾಂತರ ಮಾಡುವಾಗ ಸಮಸ್ಯೆಯಾಗಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.